ಉಡುಪಿ: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಮಹಿಳೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿಐಟಿಯು ಉಡುಪಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮಹಿಳೆಯರ ಮೇಲಿನ ಹಿಂಸೆ ಮತ್ತು ದೌರ್ಜನ್ಯ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಕ್ಷಣೆ ಕೊಡುವ ಬದಲು ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆಗಳು ತೀವ್ರ ಹೆಚ್ಚಾಗಿವೆ. ಕೆಲಸ ಸ್ಥಳ ಹಾಗೂ ಹೊರಗಡೆ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ಆಗುತ್ತಿದೆ. ಆದರೆ ಸರ್ಕಾರ ಮಹಿಳೆಯರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು.
ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಯಿಂದ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕಾಯ್ದೆಗಳಿಂದ ಮುಸ್ಲಿಮ್ ಮಹಿಳೆಯರಿಗಿಂತ ಹಿಂದೂ ಮಹಿಳೆಯರಿಗೆ ಹೆಚ್ಚು ತೊಂದರೆ ಆಗಲಿದೆ. ಅಸ್ಸಾಂನಲ್ಲಿ ಶೇ. 60ರಷ್ಟು ಮಹಿಳೆಯರಿಗೆ ದಾಖಲೆ ಒದಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಮಹಿಳೆಯರ ಆರ್ಥಿಕತೆಗೆ ಪೆಟ್ಟುನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಸೌಲಭ್ಯ, ಭದ್ರತೆ ಒದಗಿಸದೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಸಾಮಾಜಿಕ ದಬ್ಬಾಳಿಕೆ, ಮಹಿಳಾ ಶೋಷಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತು ದೌರ್ಜನ್ಯ ಎಸಗುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿಐಟಿಯು ಮುಖಂಡ ವಿಶ್ವನಾಥ ರೈ ಆಗ್ರಹಿಸಿದರು.
ಸಿಐಟಿಯು ಉಡುಪಿ ತಾಲ್ಲೂಕು ಸಮಿತಿ ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಎಸ್. ಕವಿರಾಜ್, ಮುಖಂಡರಾದ ಶಶಿಧರ ಗೊಲ್ಲ, ಭಾರತಿ, ನಳಿನಿ, ಉಮೇಶ್ ಕುಂದರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.