ಉಡುಪಿ: ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ಈ ಬಗ್ಗೆ ಒಂದು ವಾರದೊಳಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಉಡುಪಿ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ತಿಳಿಸಿದರು.
ಸದಸ್ಯೆ ನಳಿನಿ ಪ್ರದೀಪ್ ರಾವ್ ವಿಷಯ ಪ್ರಸ್ತಾಪಿಸಿ, ರಾಷ್ಟ್ರೀಯ ಹೆದ್ದಾರಿಯ ಸಂತಕಟ್ಟೆಯಿಂದ ಕಲ್ಯಾಣಪುರ ಸೇತುವೆ ವರೆಗಿನ ಭಾಗದಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಹಾಳಾಗಿದೆ. ಮಲ್ಲಿಕಾರ್ಜುನ ದೇವಸ್ಥಾನದ ಸಮೀಪ ಕಾಮಗಾರಿಗಾಗಿ ತೆಗೆದ ಗುಂಡಿಯನ್ನು ಮುಚ್ಚಿಲ್ಲ. ಇದರಿಂದ ಅಪಘಾತ ಆಗುವ ಸಾಧ್ಯತೆ ಇದೆ. ಮಳೆ ಬರುವಾಗ ಗುಂಡಿ ಕಾಣಿಸದೆ ದ್ವಿಚಕ್ರ ಸವಾರರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ದಾರಿದೀಪದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಹಾಗಾಗಿ ಕೂಡಲೇ ಸಮಸ್ಯೆ ಸರಿಪಡಿಸುವಂತೆ ಸಭೆಯಲ್ಲಿ ನಿರ್ಣಯ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಿ
ಎಂದು ಒತ್ತಾಯಿಸಿದರು.
ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ವಾರಂಬಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯ ದುರಸ್ತಿ ಕಾರ್ಯವನ್ನು ಪಂಚಾಯ್ತಿ ಅನುದಾನದಲ್ಲಿ ಮಾಡಿದ್ದು, ಹೆದ್ದಾರಿ ನಿರ್ವಹಣೆ ಜವಾಬ್ದಾರಿ ಹೆದ್ದಾರಿ ಪ್ರಾಧಿಕಾರದ ಆಗಿರುವುದರಿಂದ ಪಂಚಾಯ್ತಿ ಖರ್ಚು ಮಾಡಿದ ಹಣವನ್ನು ಪ್ರಾಧಿಕಾರ ಕೂಡಲೇ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಮೈಕಲ್ ಡಿಸೋಜ ಮಾತನಾಡಿ, ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಸರಿಯಾದ ದೀಪದ ವ್ಯವಸ್ಥೆಯಿಲ್ಲ. ಕೂಡಲೇ ದೀಪದ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ನವಯುಗ ಕಂಪೆನಿಯ ಅಧಿಕಾರಿ ಶಿವ ಪ್ರಸಾದ್, ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ದೀಪ ಅಳವಡಿಸಲು ಆಗಲ್ಲ ಎಂದರು.
ಅಧಿಕಾರಿ ಉತ್ತರಕ್ಕೆ ಆಕ್ರೋಶಗೊಂಡ ಮೈಕಲ್ ಡಿಸೋಜ ಅವರು, ಕತ್ತಲೆಯಲ್ಲಿ ಬಸ್ ನಿಲ್ದಾಣ ಹುಡುಕುವ ಪರಿಸ್ಥಿತಿ ಇದೆ. ಜನರೇಟರ್ ಹಾಕಿ ದೀಪ ಅಳವಡಿಸಿ. ಜನರು ಕತ್ತಲೆಯಲ್ಲಿ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೊರಯ್ಯ ಉಪಸ್ಥಿತರಿದ್ದರು.
ಸಮಸ್ಯೆ ಬಗೆಹರಿಯುತ್ತಿಲ್ಲ:
ಪಾದೂರು ತೈಲ ಸಂಗ್ರಹ ಘಟಕದ ಪೈಪ್ಲೈನ್ ಕಾಮಗಾರಿ ವೇಳೆ ಸಂತ್ರಸ್ತರಾಗಿರುವ ಸುಮಾರು 50ರಿಂದ 60 ಕುಟುಂಬಗಳಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಕಳೆದ ಎರಡು ವರ್ಷದಿಂದ ಪ್ರಶ್ನೆ ಕೇಳುತ್ತಿದ್ದೇನೆ. ಆದರೆ ತಹಶೀಲ್ದಾರ್ರಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆಂದು ಉತ್ತರ ಬರುತ್ತದೆಯೇ ವಿನಾಃ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಮಜೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂದೀಪ್ ರಾವ್ ಅಸಮಾಧಾನ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಇದು ಸರ್ಕಾರದ ಮಟ್ಟದಲ್ಲಿ ಇತ್ಯರ್ಥ ಆಗಬೇಕಾದ ವ್ಯಾಜ್ಯ. ಈಗಾಗಲೇ ಡಿಸಿ ಮೂಲಕ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದರು. ಇದಕ್ಕೆ ಅಸಮಾಧಾನಗೊಳ್ಳದ ಸಂದೀಪ್, ಇಲಾಖೆಗಳಿಗೆ ಬರೆಯಲಾಗಿರುವ ದಾಖಲೆಗಳನ್ನು ಕೊಡಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.