ಬೀದಿ ನಾಟಕದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ: ಬಾಲಕೃಷ್ಣ ಹೆಗ್ಡೆ

ಉಡುಪಿ: ಬೀದಿ ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳು ಬೀದಿ ನಾಟಕಗಳ ಮೂಲಕ ಸಮಾಜದಲ್ಲಿ ಜನಜಾಗೃತಿ ಮೂಡಿಸಿ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಎಸ್‌. ಬಾಲಕೃಷ್ಣ ಹೆಗ್ಡೆ ಹೇಳಿದರು.
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಿದ ಎರಡು ದಿನಗಳ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಂಗ ತರಬೇತುದಾರ ಜಗನ್‌ ಪವಾರ್‌ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವಲ್ಲಿ ಬೇಕಾಗುವ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳಲು ಹಾಗೂ ಸಮಾಜದ ಬಗೆಗೆ ತಮ್ಮಲ್ಲಿರುವ ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳಲು ಬೀದಿನಾಟಕ ಪೂರಕವಾಗುತ್ತದೆ ಎಂದರು.
ಐಕ್ಯೂಎಸಿ ಸಂಯೋಜಕ ಡಾ. ಸುರೇಶ್‌ ರೈ ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ಸಂಯೋಜಕ ಡಾ. ದುಗ್ಗಪ್ಪ ಕಜೆಕಾರ್‌ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರಾಘವ‌ ನಾಯ್ಕ್‌ ವಂದಿಸಿದರು. ಉಪನ್ಯಾಸಕ ಗಣೇಶ್‌ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.