ಜು.27: ವಿಶೇಷ‌ ಮಕ್ಕಳ ಶಿಕ್ಷಕರ ಹಾಗೂ ಮುಖ್ಯಸ್ಥರ ಸಭೆ

ಉಡುಪಿ: ಕರ್ನಾಟಕ ರಾಜ್ಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ರಾಜ್ಯದ ವಿಶೇಷ ಮಕ್ಕಳ ಶಾಲೆಗಳ ಮುಖ್ಯಸ್ಥರ ಹಾಗೂ ಶಿಕ್ಷಕರ ಸಭೆ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಇದೇ 27ರಂದು ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ ಕುಮಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 10.30ಕ್ಕೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಜಿ. ಶಂಕರ್‌ ಸಭೆ ಉದ್ಘಾಟಿಸುವರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್‌, ಬಡಗುಬೆಟ್ಟು ಕೋ–ಆಪರೇಟಿವ್‌ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಅಂಗವಿಕಲ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್‌.ವಿ. ಗೋಪಾಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ರಾಜ್ಯದ ವಿಶೇಷ ಶಾಲೆಗಳ ಮುಖ್ಯಸ್ಥರು ಒಗ್ಗೂಡಿ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಮೇಲೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.
ಶಿಶು ಕೇಂದ್ರಿಕೃತ ಸಹಾಯಧನ ಯೋಜನೆಯಡಿಯಲ್ಲಿ ಸುಮಾರು ೧೩೬ ಸಂಸ್ಥೆಗಳು ಅನುದಾನ ಪಡೆಯುತ್ತಿದ್ದು, ವಿಶೇಷ ಮಕ್ಕಳ ಸಂಖ್ಯೆಯ ಆಧಾರದ ಮೇಲೆ ಈ ಅನುದಾನ ನೀಡಲಾಗುತ್ತಿದೆ.
ಅಂಗವಿಕಲರ ಸಬಲೀಕರಣ ಇಲಾಖೆ ಆರ್‌ಸಿಐನಿಂದ ಮತ್ತೆ ಮತ್ತೆ ನವೀಕರಣ ಮಾಡುವಂತೆ ಶಾಲೆಗಳ ಮೇಲೆ ಒತ್ತಡ ಹೇರುತ್ತಿದೆ. ಅಲ್ಲದೆ ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿ ಮಾಡದಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಆಗ್ನೇಸ್‌ ಕುಂದರ್‌, ಜಿಲ್ಲಾ ಘಟಕದ
ಅಧ್ಯಕ್ಷೆ ಡಾ. ಕಾಂತಿ ಹರೀಶ್‌, ಜಿಲ್ಲಾ ಘಟಕದ ನಿರ್ದೇಶಕ ಜನಾರ್ದನ್‌ ಇದ್ದರು.
೩೮ ಶಾಲೆಗಳಿಗೆ 1982 ರ ಅದಿನಿಯಮಡದಿಯಲ್ಲಿ ಶಿಕ್ಷಕ ಕೇಂದ್ರೀಕೃತ ಅನುದಾನ ದೊರೆತರೆ 116 ವಿಶೇಷ ಶಾಲೆಗಳಿಗೆ ಶಿಶು ಕೇಂದ್ರೀಕೃತ ಅನುದಾನ ಲಭಿಸುತ್ತದೆ.
ರಾಜ್ಯದಲ್ಲಿ ಒಟ್ಟು ೫೦೦ಕ್ಕಿಂತಲೂ ಹೆಚ್ಚಿನ ವಿಶೇಷ ಮಕ್ಕಳ ಶಾಲೆಗಳು
ಕಾರ್ಯನಿರ್ವಹಿಸುತ್ತಿವೆ. ೧೯೮೨ರ ಅನುದಾನ ನೀತಿ ಸಂಹಿತೆಯಡಿ ಯಲ್ಲಿ ಇರುವ ೩೮  ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ
ಸಿಬ್ಬಂದಿಗೆ ವೇತನ ಮಾತ್ರ ನೀಡಲಾಗುತ್ತಿದೆ. ಇತರೆ ಯಾವುದೇ ಸವಲತ್ತು ಈ ಶಾಲೆಗಳಿಗೆ
ದೊರಕುತ್ತಿಲ್ಲ. ಅದೇ ಶಿಶು ಕೇಂದ್ರೀಕೃತದ ಅನುದಾನ ಪಡೆಯುತ್ತಿರುವ 116 ಸಂಸ್ಥೆಗಳ ವಿಶೇಷ ಶಿಕ್ಷಕರು ಗೌರವಧನ ಕೇವಲ‌ ರು. 13,500/-ವೇತನ ಪಡೆಯುತ್ತಿದ್ದಾರೆ. ಈ ಅನುದಾನದಲ್ಲಿ ಶಿಕ್ಷಕರಿಗೆ  ಕನಿಷ್ಠ ವೇತನವನ್ನಾದ್ರೂ ನೀಡಬೇಕೆಂಬ ಬಗ್ಗೆ ಸರಕಾರಕ್ಕೆ ಡಾ.ವಸಂತ ಕುಮಾರ್‌ ಶೆಟ್ಟಿ ಒತ್ತಾಯಿಸಿದರು.