ವಿಶೇಷ ಮಕ್ಕಳನ್ನು ಉತ್ತಮ ‌ಪ್ರಜೆಗಳಾಗಿ ರೂಪಿಸುವಲ್ಲಿ ವಿಶೇಷ ಶಾಲೆಯ‌ ಶಿಕ್ಷಕರ ಪಾತ್ರ ಮಹತ್ತರವಾದುದು: ಪ್ರವೀಣ್ ಬಿ.ನಾಯಕ್

ಉಡುಪಿ: ದೈಹಿಕ ಹಾಗೂ ಮಾನಸಿಕ ಪಕ್ವತೆಯಿಲ್ಲದ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಪಾತ್ರ ಮಹತ್ತರವಾದುದು. ಕಳೆದ 8 ವರ್ಷಗಳಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ವಿಶೇಷ ಮಕ್ಕಳ ಶಾಲೆಯ
ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್‌ ಬಿ. ನಾಯಕ್‌ ಹೇಳಿದರು.
ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ವತಿಯಿಂದ ಅಂತರರಾಷ್ಟ್ರೀಯ ಲಯನ್ಸ್‌ ಸೇವಾ ಸಂಸ್ಥೆ, ಉಡುಪಿ–ಇಂದ್ರಾಳಿ ಲಯನ್ಸ್‌ ಕ್ಲಬ್‌, ಲಿಯೋ ಕ್ಲಬ್‌, ಜಿಲ್ಲಾ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘದ ಸಹಯೋಗದಲ್ಲಿ ನಗರದ ಆಶಾ ನಿಲಯದಲ್ಲಿ ಗುರುವಾರ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ್‌ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿಶೇಷ ಮಕ್ಕಳ ಲಾಲನೆ ಪಾಲನೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕೆಲ ಶಿಕ್ಷಕರು ಕುಟುಂಬದಿಂದ ದೂರ ಉಳಿದು ಈ ಮಕ್ಕಳ ಪೋಷಣೆಯಲ್ಲಿ ತೊಡಗಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಹಕಾರಿ ಸಂಘಗಳ ಕುಂದಾಪುರ ವಿಭಾಗದ ಉಪನಿಬಂಧಕಿ ಚಂದ್ರಪ್ರತಿಮಾ, ಲಯನ್ಸ್‌ ಜಿಲ್ಲೆ 317 ಸಿ ಪ್ರಥಮ ಉಪ ಜಿಲ್ಲಾ ಗವರ್ನರ್‌ ಎನ್‌.ಎಂ. ಹೆಗ್ಡೆ, ದ್ವಿತೀಯ ಉಪ ಜಿಲ್ಲಾ ಗವರ್ನರ್‌ ವಿಶ್ವನಾಥ ಶೆಟ್ಟಿ, ಲಿಯೋ ಕ್ಲಬ್‌ ಜಿಲ್ಲಾಧ್ಯಕ್ಷ -ಝಾನಾ ಅಕ್ರಮ್‌,
ರೋಟರಿ ಕ್ಲಬ್‌ ಸದಸ್ಯ ಸುಧೀರ್‌ ಕುಮಾರ್‌, ಉಡುಪಿ-ಇಂದ್ರಾಳಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹೃಷಿಕೇಶ್‌ ಹೆಗ್ಡೆ, ಆಶಾ ನಿಲಯದ ಮುಖ್ಯ ಶಿಕ್ಷಕಿ ಜಯವಿಜಯ, ಆಗ್ನೇಶಾ ಕುಂದರ್‌ ಉಪಸ್ಥಿತರಿದ್ದರು.
ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಮತ್ತು ಶಿಕ್ಷಕೇತರ ಸಂಘದ ರಾಜ್ಯಧ್ಯಕ್ಷೆ ಕಾಂತಿ ಹರೀಶ್‌ ಸ್ವಾಗತಿಸಿ, ರವೀಂದ್ರ ವಂದಿಸಿದರು. ಈ ಸಂದರ್ಭದಲ್ಲಿ ವಿಶೇಷ ಮಕ್ಕಳ ಶಾಲೆಯ 14 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು.