ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಜೀವನದಲ್ಲಿ ಸ್ಪರ್ಧೆ ನಿರಂತರವಾಗಿದ್ದು, ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋತರೆ ಎದೆಗುಂದದೆ, ಸೋಲನ್ನು ಸವಾಲನ್ನಾಗಿ ಸ್ವೀಕರಿಸಿ, ಮುನ್ನಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ವತಿಯಿಂದ ಉಡುಪಿ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾನಾಡಿದರು.

ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ಸುಗಳಿಸಬೇಕು ಎನ್ನುವ ಸಲುವಾಗಿ ಕ್ರೀಡಾಪಟುಗಳು ಅವಿರತ ಶ್ರಮವಹಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ರೀಡೆಯಲ್ಲಿ ಹಿನ್ನಡೆಯಾದಾಗ ಬೇಸರ ಪಟ್ಟುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಆದ ಕಾರಣ ಕ್ರೀಡಾಭಿಮಾನಿಗಳು ಕ್ರೀಡಾಪಟುಗಳನ್ನು ಹುರಿದುಂಬಿಸುವ ಮೂಲಕ ಕ್ರೀಡೆಯಲ್ಲಿ ಅಭಿವೃದ್ಧಿ ಹೊಂದಲು ಪ್ರೇರೇಪಿಸಬೇಕು ಎಂದರು.

ಉಡುಪಿ ನಗರಸಭಾ ಸದಸ್ಯೆ ರಶ್ಮಿ ಸಿ ಭಟ್ ಮಾತನಾಡಿದರು.

ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮತ್ತು ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಮಾತನಾಡಿ, ಕ್ರೀಡಾ ಮನೋಭಾವ ಇದ್ದರೆ ಬದುಕನ್ನು ಸಾರ್ಥಕತೆಗೊಳಿಸಲು ಸಾಧ್ಯವಾಗುತ್ತದೆ. ಗುರಿ ಮತ್ತು ಪ್ರಯತ್ನದ ಮೂಲಕ ಅದ್ಭುತ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಜಿಲ್ಲೆಗೆ ಗೌರವವನ್ನು ತಂದುಕೊಡುವ ಮೂಲಕ ಅದ್ಭುತ ಸಾಧನೆ ಮಾಡುವಂತಾಗಲಿ ಎಂದು ಕ್ರೀಡಾಪಟುಗಳನ್ನು ಹರಸಿದರು.

ತ್ರಿವರ್ಣ ಬಲೂನ್‍ನ್ನು ಹಾರಿಸುವ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ತೆಂಕನಿಡಿಯೂರು ಸ್ಪೋಟ್ಸ್ ಕ್ಲಬ್‍ನ ಗೌರವಾಧ್ಯಕ್ಷ ಶಶಿಧರ್ ಕೆ. ಕುಂದರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ಅನಂತರಾಮು ಮತ್ತಿತರರು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಉಪನ್ಯಾಸಕ ನಿತ್ಯಾನಂದ ನಿರೂಪಿಸಿ ವಂದಿಸಿದರು.