ಉಡುಪಿ ತಾಲೂಕಿನ ಸಂಘಟನೆ, ಧಾರ್ಮಿಕ‌ ಮುಖಂಡರ ಶಾಂತಿ ಸಭೆ; ಕ್ಯಾಂಪಸ್ ಫ್ರಂಟ್ ಸಂಘಟನೆ ಗೈರು

ಉಡುಪಿ: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಹಾಗೂ ನಾಳೆಯಿಂದ ಪ್ರೌಢಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಹಾಗೂ ಧಾರ್ಮಿಕ ಮುಖಂಡರ ಶಾಂತಿ ಸಭೆಯು ಭಾನುವಾರ ಉಡುಪಿ ತಾಲೂಕು ಕಚೇರಿಯಲ್ಲಿ ನಡೆಯಿತು.

ಆದರೆ, ಹಿಜಾಬ್ ಧರಿಸಲು ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರಿಗೆ ಬೆಂಬಲವಾಗಿ ನಿಂತಿದ್ದ ಕ್ಯಾಂಪಸ್ ಫ್ರಂಟ್ ಸಂಘಟನೆ ಗೈರಾಗಿತ್ತು.

ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ‌ ನೀಡಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಹುರ್ಡೇಕರ್, ಉಡುಪಿ ತಾಲೂಕಿನ ಸರ್ವಪಕ್ಷ ಹಾಗೂ ಸರ್ವಧರ್ಮ ಸಭೆ ನಡೆಸಿದ್ದೇವೆ. ಈ ಸಭೆಯಲ್ಲಿ ಮಠ, ಮಂದಿರಗಳ ಧರ್ಮಗುರುಗಳು ಭಾಗವಹಿಸಿದ್ದರು. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಲು ಒಪ್ಪಿದ್ದಾರೆ. ಶಾಂತಿ ಸಭೆ ಯಶಸ್ವಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಶಾಂತಿ ಸುವ್ಯಸ್ಥೆಯನ್ನು ಕಾಪಾಡುವುದು ಎಲ್ಲ ಸಂಘಟನೆಯ ಕರ್ತವ್ಯವಾಗಿದೆ. ಹಾಗಾಗಿ ಕೋರ್ಟ್ ಆದೇಶ ಬರುವವರೆಗೂ ಮಕ್ಕಳು ಕಾಲೇಜಿಗೆ ಸಮವಸ್ತ್ರವನ್ನು ಹಾಕಿಕೊಂಡು ಬರಬೇಕು ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ್ ರಾಜ್ ಬಿರ್ತಿ, ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಎಸ್ ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಮೊದಲಾದವರು ಇದ್ದರು.