ಉಡುಪಿ: ನಗರ ಠಾಣೆಯ ಠಾಣಾಧಿಕಾರಿ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಕೂಡಲೇ
ಆ ಆದೇಶವನ್ನು ವಾಪಾಸು ಪಡೆಯಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಅವರು, ಸೋಮವಾರ ರಾತ್ರಿ ಉಡುಪಿ ನಗರ ಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಕಾರಣವಿಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಅಮಾನತು ಮಾಡಿದ್ದಾರೆ. ಶಾಸಕನಾಗಿ ಇದನ್ನು ನಾನು ಖಂಡಿಸುತ್ತೇನೆ. ಅವರು ಏನಾದರೂ ಭ್ರಷ್ಠಾಚಾರ ನಡೆಸಿದ್ದರೆ ಅಮಾನತು ಮಾಡಿದ್ದಲ್ಲಿ ನಾನು ಅದನ್ನು ಒಪ್ಪಬಹುದು.
ಭಿನ್ನ ಕೋಮಿನ ಯುವಕ ಮತ್ತು ಯುವತಿ ನಗರದ ಭುಜಂಗ ಪಾರ್ಕಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದು, ಅಲ್ಲಿದ್ದ ನಾಗರಿಕರು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ ಯುವಕನಿಗೆ ಸ್ವಲ್ಪ ಪೆಟ್ಟಾಗಿದ್ದು, ಬಳಿಕ ಪೊಲೀಸರು
ಹುಡುಗಿಯ ಮನೆಯವರನ್ನು ಕರೆಸಿದ್ದು ಹುಡುಗನನ್ನು ಕೂಡ ಕರೆಸಿದ್ದಾರೆ. ಈ ವೇಳೆ ಯಾವುದೇ ಕೇಸು ಕೊಡುವುದಿಲ್ಲ ತನ್ನ ತಪ್ಪಾಗಿದೆ ಎಂದು ಯುವಕ ಕ್ಷಮೆ ಕೇಳಿದ್ದಾನೆ. ಅದರ ಬಳಿಕ ಠಾಣಾಧಿಕಾರಿ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ನಾಲ್ಕೈದು ದಿವಸದ ಮೇಲೆ ಯುವಕ ಬೇರೆಯವರ ಪ್ರೇರಣೆಯ ಮೇಲೆ ಬಂದು ಎಸ್ಪಿಯವರಲ್ಲಿ ದೂರು ದಾಖಲಿಸಿದ್ದಾನೆ.
ಅದರಂತೆ ಸ್ವಾಭಾವಿಕವಾಗಿ ಎಸ್ಪಿಯವರು ಎಫ್ ಐ ಆರ್ ದಾಖಲಿಸಿದ್ದಾರೆ. ಆದರೆ ಸೋಮವಾರ ಏಕಾಏಕಿ ನಮಗೆ ಯಾರಿಗೂ ತಿಳಿಸಿದೆ ಠಾಣಾಧಿಕಾರಿಯವರನ್ನು ಅಮಾನತು ಮಾಡಿದ್ದಾರೆ. ಅವರು ಉಡುಪಿಯಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರೇನು ನಮ್ಮ ಸರಕಾರ ಬಂದ ಬಳಿಕ ಸೇವೆಗೆ ಬಂದವರಲ್ಲ. ಅವರು ಎಲ್ಲರೊಂದಿಗೆ ಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದವರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಕೇಳಿದರೆ ಅವರು ಎಫ್ ಐ ಆರ್ ಮಾಡಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂಬುದಾಗಿ ಹೇಳಿದ್ದಾರೆ.
ಒಂದು ಧರ್ಮದವರ ಒತ್ತಡಕ್ಕೆ ಮಣಿದು ಎಸ್ಪಿಯವರು ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಈ ಘಟನೆಯ
ಬಗ್ಗೆ ಈಗಾಗಲೇ ನಾನು ಗೃಹಮಂತ್ರಿ ಮತ್ತು ಪಶ್ಚಿಮ ವಲಯ ಐಜಿಪಿಯವರಿಗೆ ಕೂಡ ಮಾಹಿತಿ ನೀಡಿದ್ದೇನೆ ಎಂದರು.