ಮೂರು ತಿಂಗಳ‌ ವೇತನ ಬಾಕಿ: ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಂದ ಮುಷ್ಕರ

ಉಡುಪಿ: ಉಡುಪಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯ ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ.

ಆಸ್ಪತ್ರೆಯ 200ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದು, ಕೂಡಲೇ ವೇತನ ಪಾವತಿಸುವಂತೆ ಆಗ್ರಹಿಸಿದ್ದಾರೆ. ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ನಮಗೆ ಬಹಳ ಸಮಸ್ಯೆ ಆಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.

ಆಡಳಿತ ಮಂಡಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆಡಳಿತ ಮಂಡಳಿಯು ‘ನಾವು ನಷ್ಟದಲ್ಲಿದ್ದೇವೆ, ನಮ್ಮಿಂದ ವೇತನ ಪಾವತಿ ಮಾಡಲು ಆಗಲ್ಲ’ ಎಂಬ ಸಾಬೂಬು ನೀಡುತ್ತಿದೆ. ಹೀಗಾಗಿ ನಾವು ಅನಿವಾರ್ಯವಾಗಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಸಿಬ್ಬಂದಿ ಆಳಲು ತೋಡಿಕೊಂಡರು.

ಕಳೆದ ಅಕ್ಟೋಬರ್ ನಿಂದ ಪಿಎಫ್ ಹಣವನ್ನೂ ಕೂಡ ತಡೆಹಿಡಿದಿದ್ದಾರೆ. ಬಾಕಿ ವೇತನವನ್ನು ಪಾವತಿಸುವ ಬಗ್ಗೆ ಯಾವ ಮಾಹಿತಿಯನ್ನು ನೀಡುತ್ತಿಲ್ಲ. ಕೆಲಸ ಮುಂದುವರೆಸಿ ವೇತನ ಕೊಡುತ್ತೇವೆ ಎನ್ನುತ್ತಾರೆ. ಆದರೆ ವೇತನ ಇಲ್ಲದೆ ಎಷ್ಟು ದಿನ ಅಂತಾ ದುಡಿಯಲು‌ ಸಾಧ್ಯ ಎಂದು ಪ್ರತಿಭಟನಾ ನಿರತರ ಪ್ರಶ್ನೆಯಾಗಿದೆ.

ರೋಗಿಗಳ ಪರದಾಟ:
ವೈದ್ಯರು, ಸಿಬ್ಬಂದಿಗಳ ಮುಷ್ಕರದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿಯರು, ರೋಗಿಗಳು ತೊಂದರೆಗೊಳಗಾಗಿದ್ದಾರೆ. ಏಕಾಏಕಿ ಆಸ್ಪತ್ರೆಯ 200ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಇಂದು ಬೆಳಗ್ಗಿನಿಂದ ಯಾವುದೇ ಚಿಕಿತ್ಸೆಯೂ ಇಲ್ಲಿ ಸಿಗುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ.