ಉಡುಪಿ: ಜಿಲ್ಲೆಯಾದ್ಯಂತ ಇಂದಿನಿಂದ (ಸೆ.3) ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ

ಉಡುಪಿ: ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ 9ಗಂಟೆಯಿಂದ (ಸೆ.3) ಸೋಮವಾರ (ಸೆ.6) ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಡಿಸಿ ಕೂರ್ಮ ರಾವ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಉಳಿದಂತೆ ಜನರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ದಿನಸಿ ಅಂಗಡಿ, ಮೀನು ಹಾಗೂ ಮಾಂಸದ ಅಂಗಡಿಗಳಿಗೆ ಬೆಳಿಗ್ಗೆ 5ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಎಲ್ಲ ತರದ ಮದ್ಯದಂಗಡಿ, ಬಾರ್ ಗಳಲ್ಲಿ ಮದ್ಯ ಪಾರ್ಸೆಲ್ ತೆಗೆದುಕೊಳ್ಳಲು ಬೆಳಿಗ್ಗೆ 5ರಿಂದ 2 ರವರೆಗೆ ಅವಕಾಶ ನೀಡಲಾಗಿದೆ. ಹಾಲಿನ ಡೈರಿ ಹಾಗೂ ಬೂತ್ ಗಳಿಗೆ ರಾತ್ರಿ 8 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ತೆಗೆದುಕೊಳ್ಳಲು ಮಾತ್ರ ಅನುಮತಿ ನೀಡಲಾಗಿದೆ.

ಹೋಮ್ ಡೆಲಿವೆರಿ ಸೌಲಭ್ಯವು ಎಂದಿನಂತೆ ಇರಲಿದೆ. ಅಗತ್ಯ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಚಟುವಟಿಕೆಗಳು ಬಂದ್ ಅಗಲಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.