ಉಡುಪಿ:ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳಿಂದ ಅರ್ಜಿ ಆಹ್ವಾನ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ ಜಿಲ್ಲೆ ಇವರ ವತಿಯಿಂದ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಅಧೀನ ಕಚೇರಿಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಜಿಲ್ಲೆಯ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರತಿ ಬೀದಿನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ
ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದ ಕಲಾವಿದರನ್ನು ಒಳಗೊಂಡಿರಬೇಕು. ಪ್ರತಿ ಜಾನಪದ ಸಂಗೀತ ಕಲಾ ತಂಡದಲ್ಲಿ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದ ಕಲಾವಿದರು ಇರುವುದು ಕಡ್ಡಾಯವಾಗಿದ್ದು, ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಕಲಾವಿದರುಗಳನ್ನು ಆಯ್ಕೆ ಮಾಡುವಾಗ ಅನುಭವಕ್ಕೆ 10 ಅಂಕಗಳು, ಕಲೆಯ ಅಭಿವ್ಯಕ್ತಿಗೆ 10 ಅಂಕಗಳು, ಸಂಗೀತಕ್ಕೆ 10 ಅಂಕಗಳು, ಸೃಜನಶೀಲತೆಗೆ ಹಾಗೂ ಪ್ರಸ್ತುತಪಡಿಸುವಿಕೆಗೆ 10 ಅಂಕಗಳನ್ನು ನೀಡಲಾಗುವುದು.ಆಸಕ್ತ ಅರ್ಹ ಬೀದಿ ನಾಟಕ ತಂಡಗಳು ಮತ್ತು ಜಾನಪದ ಸಂಗೀತ ಕಲಾ ತಂಡಗಳು ಆಗಸ್ಟ್ 01 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯನ್ನು ಕಚೇರಿ ವೇಳೆಯಲ್ಲಿ
ಸಂಪರ್ಕಿಸಬಹುದಾಗಿದೆ.

ಕಲಾ ತಂಡಗಳ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ, ಪರಿಶಿಷ್ಟ ಕಲ್ಯಾಣ
ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, 2025 ರ ಆಗಸ್ಟ್ 12 ರಂದು ಬೆಳಿಗ್ಗೆ 11 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.