ಉಡುಪಿ: ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು
ಕೈಗೊಳ್ಳಲು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನಿರ್ದೇಶನ ನೀಡಿದ್ದು, ಅವುಗಳ ಪಾಲನೆ ಮಾಡಿ, ವರದಿ ನೀಡಬೇಕೆಂದು ಅಧಿಕಾರಿಗಳಿಗೆ
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.
ಅವರು ಗುರುವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಸ್ತç ಚಿಕಿತ್ಸೆಯ ನಂತರ ನಾಯಿಗಳನ್ನು ಅದೇ ಸ್ಥಳಕ್ಕೆ ವಾಪಾಸು ಬಿಡಬೇಕು. ರೇಬೀಸ್ ಕಾಯಿಲೆ, ಸಂಶಯಾಸ್ಪದ ರೋಗ ಪೀಡಿತ ಆಕ್ರಮಣಕಾರಿ ನಡತೆ ಇರುವ ನಾಯಿಗಳನ್ನು ಆಶ್ರಯ ತಾಣಗಳಿಗೆ ಬಿಡಬೇಕು. ಸಹಾಯವಾಣಿ ಸ್ಥಾಪನೆ ಹಾಗೂ ಪ್ರದರ್ಶನವನ್ನು ಮಾಡಬೇಕು. ಆಶ್ರಯ ತಾಣಗಳಲ್ಲಿ ಸ್ವಚ್ಚತೆ, ಆಹಾರ, ನೀರು, ನೆರಳು,ಪಶು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಬೇಕು ಎಂದ ಅವರು, ಪ್ರಾಣಿಗಳ ಹಾಗೂ ನಾಗರಿಕರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ 18,500 ರಷ್ಟು ಇದ್ದು, ಈಗಾಗಲೇ ನಾಯಿಗಳ ಆಶ್ರಯ ತಾಣಕ್ಕಾಗಿ ಉಡುಪಿ ನಗರ ಭಾಗದಲ್ಲಿ ಒಂದು
ಎಕರೆ ಜಾಗ ಗುರುತಿಸಲಾಗಿದ್ದು, ಇಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಆಶ್ರಯ ತಾಣ ಪ್ರಾರಂಭಿಸಲು ಹಾಗೂ ಮುಂದಿನ ಮೂರು ದಿನಗಳಲ್ಲಿ ತಾಲೂಕು ಮತ್ತು ನಗರ ಪ್ರದೇಶಕ್ಕೆ ಒಂದರಂತೆ ಆಶ್ರಯ ತಾಣ ನಿರ್ಮಿಸಲು ಬೇಕಾದ ಜಾಗ ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಬೀದಿನಾಯಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ಸಮನ್ವಯದೊಂದಿಗೆ ಪದೇ ಪದೇ
ಬೀಡಾಡಿ ದನಗಳು ಮತ್ತು ಪ್ರಾಣಿಗಳು ಕಾಣಿಸುವ ರಾಷ್ಟ್ರೀಯ ಹೆದ್ದಾರಿ ಪರಿಮಿತಿಗಳನ್ನು ಗುರುತಿಸಬೇಕು. ಅಲ್ಲಿರುವ ಎಲ್ಲಾ ದನ ಸೇರಿದಂತೆ
ಬೀಡಾಡಿ ಪ್ರಾಣಿಗಳನ್ನು ಆಶ್ರಯ ತಾಣಗಳಿಗೆ ಅಥವಾ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದ ಅವರು, ಹೆದ್ದಾರಿಗಳಲ್ಲಿ ಸ್ಪಷ್ಟವಾಗಿ
ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು. ಸದರಿ ಸಂಖ್ಯೆಗಳನ್ನು ಎನ್.ಹೆಚ್.ಎ.ಐ ಕಂಟ್ರೋಲ್ ರೂಂ ಮತ್ತು ಸ್ಥಳೀಯ ಪೊಲೀಸ್
ಇಲಾಖೆಯ ಕಂಟ್ರೋಲ್ ರೂಂ ಗೆ ಲಿಂಕ್ ಮಾಡಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳು, ಡಿಪೋಗಳು, ಬಸ್ ಹಾಗೂ ರೈಲ್ವೆ ನಿಲ್ದಾಣ, ಆಸ್ಪತ್ರೆ ಹಾಗೂ ಕ್ರೀಡಾಂಗಣಗಳನ್ನು ಗುರುತಿಸಿ
ಪಟ್ಟಿ ಮಾಡಿ, ಅಲ್ಲಿರುವ ಬೀದಿ ನಾಯಿಗಳ ಸಂಖ್ಯೆಯನ್ನು ಪತ್ತೆ ಹಚ್ಚಬೇಕು. ಈ ಸಂಸ್ಥೆ ವ್ಯಾಪ್ತಿಗಳಲ್ಲಿ ಹಾಗೂ ಸಾರ್ವಜನಿಕ ಆವರಣಗಳಲ್ಲಿ ಸೂಕ್ತ ಬೇಲಿ, ಕಂಪೌಂಡ್, ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಳವಡಿಸಿ, ಬೀದಿ ನಾಯಿಗಳು ಪ್ರವೇಶಿಸದಂತೆ ಕ್ರಮವಹಿಸಬೇಕು ಎಂದ ಅವರು, ಸ್ಥಳೀಯ ನಗರ ಹಾಗೂ ಗ್ರಾಮೀಣ ಸಂಸ್ಥೆಗಳು ಪ್ರತೀ ಮೂರು ತಿಂಗಳಿಗೊಮ್ಮೆ ಮೇಲ್ಕಾಣಿಸಿದ ಆವರಣಗಳಲ್ಲಿ ಬೀದಿ ನಾಯಿಗಳ ವಾಸಸ್ಥಾನಗಳು ಇಲ್ಲದಿರುವ ಬಗ್ಗೆ ತಪಾಸಣೆ ನಡೆಸಿ ವರದಿ, ಸಲ್ಲಿಸಬೇಕು ಎಂದರು.
ಸಾಕು ನಾಯಿಗಳ ಮಾಲೀಕರು ನೋಂದಣಿ ಮಾಡಿಕೊಂಡು ನಾಯಿಗಳಿಗೆ ಕಡ್ಡಾಯವಾಗಿ ಕಾಲರ್ ಪಟ್ಟಿ ಅಳವಡಿಸಬೇಕು. ಕಾಲರ್ ಪಟ್ಟಿ ಇಲ್ಲದೆ ರಸ್ತೆ ಬದಿ ಅಲೆದಾಡುತ್ತಿದ್ದರೆ ಅವುಗಳನ್ನು ಬೀದಿ ನಾಯಿ ಎಂದು ಪರಿಗಣಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸುವಂತೆ ಪ್ರಕಟಣೆಗೊಳಿಸಿ ಎಂದು ಸೂಚನೆ ನೀಡಿದರು.
ಈಗಾಗಲೇ ಉಡುಪಿ ನಗರಸಭಾ ವ್ಯಾಪ್ತಿಯ 10 ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಜಾಗಗಳನ್ನು ಗುರುತಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಸಹ ಆದಷ್ಟು ಶೀಘ್ರವಾಗಿ ಜಾಗ ಗುರುತಿಸುವ ಕೆಲಸವಾಗಬೇಕು ಎಂದ ಅವರು, ಎಲ್ಲರಿಗೂ ಗುರುತಿನ ಚೀಟಿ ನೀಡಿ ನಿಗದಿಪಡಿಸಿದ ಜಾಗದಲ್ಲೆ ಆಹಾರ ನೀಡುವಂತೆ ಕ್ರಮ ವಹಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಸಾರಿಗೆ, ನಗರಾಭಿವೃದ್ದಿ, ಪಂಚಾಯತ್ ರಾಜ್,
ಪಶುಪಾಲನಾ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದ ಅವರು, ನಾಯಿಗಳ ಆರೈಕೆಗೆ ಸೂಕ್ತ ಸ್ಥಳವನ್ನು ಗುರುತಿಸಿ ಸಂವೇದನಾಶೀಲರಾಗಿ ಆದಷ್ಟು ಬೇಗ ಅವುಗಳನ್ನು ಸ್ಥಳಾಂತರಿಸಬೇಕು ಎಂದರು.
ಸ್ಥಳಾಂತರ ಮಾಡಲಾಗುವ ಬೀದಿ ನಾಯಿಗಳ ಆಶ್ರಯ ತಾಣಗಳ ನಿರ್ವಹಣೆಗಾಗಿ ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಪಶುಸಂಗೋಪನೆ
ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಯಿ ಕಡಿತದಿಂದ ಉಂಟಾಗಬಹುದಾದ ರೇಬೀಸ್ ರೋಗದ ಅಪಾಯಗಳು
ಮತ್ತು ಲಸಿಕೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೇಬೀಸ್ ನಿರೋಧಕ ಲಸಿಕೆಯ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಮಟ್ಟದಲ್ಲಿ ನೋಡೆಲ್ ಅಧಿಕಾರಿಯನ್ನು ನೇಮಿಸಲು ಸೂಚಿಸಿದ ಅವರು, ದೂರುಗಳ ಸಂಬಂಧ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ
ಸಹಾಯವಾಣಿ ತೆರೆದು ಅದು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ವಾರ್ತಾಧಿಕಾರಿ
ಮಂಜುನಾಥ್ ಬಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


















