ಉಡುಪಿ: ಸಹಬಾಳ್ವೆ ಉಡುಪಿ ಹಾಗೂ ಕರ್ನಾಟಕದ ಸೌಹಾರ್ದ ಪರ ಸಂಘಟನೆಗಳ ಸಹಯೋಗದಲ್ಲಿ ಮೇ 14ರ ಶನಿವಾರ ಮಧ್ಯಾಹ್ನ 2ರಿಂದ ರಾಜ್ಯಮಟ್ಟದ ಸಾಮರಸ್ಯದ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ ನಡೆಯಲಿದೆ ಎಂದು ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿಯ ಕೆ.ಫಣಿರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇ 14ರ ಕಾರ್ಯಕ್ರಮ ವಿವರಗಳನ್ನು ನೀಡಿದ ಅವರು ಮಧ್ಯಾಹ್ನ 2ಕ್ಕೆ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಚೌಕದ ಬಳಿ ಸಾಮರಸ್ಯದ ನಡಿಗೆಗೆ ಚಾಲನೆ ದೊರೆಯಲಿದೆ ಎಂದರು.
ಸಮಾವೇಶದಲ್ಲಿ ಸಹಭಾಗಿಯಾಗಿರುವ ಕರ್ನಾಟಕದ ಸೌಹಾರ್ದ ಸಂಘಟನೆಗಳ ಮುಂದಾಳುಗಳಾದ ಮಾವಳ್ಳಿ ಶಂಕರ್, ಆರ್.ಮೋಹನ್ ರಾಜ್ (ದಸಂಸ), ಎಚ್.ಆರ್.ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ (ರೈತ ಮುಖಂಡರು), ಕೆ.ನೀಲಾ (ಮಹಿಳಾಹಕ್ಕು ಹೋರಾಟ ಗಾರ್ತಿ), ಡಾ.ಬೆಳಗಾಮಿ ಮಹಮ್ಮದ್ ಸಾದ್, ಸಬೀಹ ಫಾತಿಮ ಹಾಗೂ ನಜ್ಮಾ ಚಿಕ್ಕನೇರಳೆ (ಯುವ ಹೋರಾಟಗಾರರು) ಏಳು ಬಣ್ಣದ ಪತಾಕೆಯನ್ನು ಬೀಸುವ ಮೂಲಕ ನಡಿಗೆಯನ್ನು ಉದ್ಘಾಟಿಸಲಿದ್ದಾರೆ ಎಂದರು.
ಸಾಮರಸ್ಯದ ನಡಿಗೆಯಲ್ಲಿ ನಾಡಿನ ಮಹಾನ್ ವ್ಯಕ್ತಿಗಳಾದ ನಾರಾಯಣ ಗುರುಗಳು, ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ.ಟಿಎಂಎ ಪೈ ಅವರ ಪ್ರಾತ್ಯಕ್ಷಿಕೆಗಳು, ಕರ್ನಾಟಕ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು, ರಾಷ್ಟ್ರಧ್ವಜ ಹಾಗೂ ಏಳು ಬಣ್ಣದ ಪತಾಕೆ ಹಿಡಿದ 15ರಿಂದ 20 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಫಣಿರಾಜ್ ತಿಳಿಸಿದರು.
ಸೌಹಾರ್ದ ನಡಿಗೆಯು ಹುತಾತ್ಮ ಚೌಕದಿಂದ ಪ್ರಾರಂಭಗೊಂಡು ಜೋಡುಕಟ್ಟೆ, ಕೋರ್ಟ್ ರೋಡ್, ಡಯಾನ ವೃತ್ತ, ತ್ರಿವೇಣಿ ಸರ್ಕಲ್, ಕ್ಲಾಕ್ ಟವರ್, ಕಿದಿಯೂರು ಹೊಟೇಲ್, ಸಿಟಿ ಬಸ್ ನಿಲ್ದಾಣ ರಸ್ತೆ, ಸರ್ವಿಸ್ ಬಸ್ ನಿಲ್ದಾಣದ ಪಕ್ಕದ ರಸ್ತೆ, ಕ್ಲಾಕ್ ಟವರ್ ಎಡರಸ್ತೆ, ತ್ರಿವೇಣಿ ಸರ್ಕಲ್, ಡಯಾನ ಸರ್ಕಲ್, ಹಳೆ ತಾಲೂಕು ಕಚೇರಿ ವೃತ್ತ, ಮಿಷನ್ ಆಸ್ಪತ್ರೆ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಸಂಜೆ 4 ಗಂಟೆ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆಯಲಿದೆ. ಇದರಲ್ಲಿ ವಿವಿಧ ಜಾತಿಮತಗಳ ಧರ್ಮಗುರುಗಳು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೆಂಥಿಲ್ ವಹಿಸಲಿದ್ದು, ಖ್ಯಾತ ಮಾನವಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್ ಪ್ರಧಾನ ಭಾಷಣ ಮಾಡಲಿದ್ದಾರೆ. ಕರ್ನಾಟಕ ಕ್ರೈಸ್ತ ಸಂಘ-ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ರೊನಾಲ್ಡ್ ಕುಲಾಸೋ ಸೌಹಾರ್ದ ಸಂದೇಶ ನೀಡಲಿದ್ದಾರೆ ಎಂದರು.
ವಿವಿಧ ಧರ್ಮಗುರುಗಳಾದ ಹಿರೇಮಠ ಸಂಸ್ಥಾನದ ಶ್ರೀಗುರುಬಸವ ಪಟ್ಟದೇವರು, ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆ ಸಂಯುಕ್ತ ಜಮಾತ್ನ ಖಾಜಿಗಳಾದ ಝೈನುಲ್ ಉಲುಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೋಲಿಕ್ ಚರ್ಚ್ನ ಬಿಷಪ್ ಅ.ವಂ.ವರ್ಗೀಸ್ ಮಾರ್ ಮಕರಿಯೋಸ್, ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ, ಬೆಳಗಾವಿ ಬಸವ ಮಂಟಪದ ಬಸವ ಧರ್ಮಪೀಠದ ಶ್ರೀಬಸವ ಪ್ರಕಾಶ್ ಸ್ವಾಮೀಜಿ, ಲೋಕರತ್ನ ಬುದ್ಧ ವಿಹಾರ ಬೆಂಗಳೂರಿನ ಭಂತೆ ಮಾತೆ ಮೈತ್ರಿ, ಜಮಿಯ್ಯತುಲ್ ಉಲಮಾ ಹಿಂದ್ ಕರ್ನಾಟಕದ ಅಧ್ಯಕ್ಷ ಮೌಲಾನ ಇಫ್ತಿಯಾರ್ ಅಹ್ಮದ್ ಕಾಸ್ಮಿ, ಸುನ್ನಿ ಯುವಜನ ಸಂಘ ಕರ್ನಾಟಕದ ಅಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರಾದ ರೆವರೆಂಡ್ ಡಾ.ಹಾಬರ್ಟ್ ಎಂ.ವಾಟ್ಸನ್, ಕರ್ನಾಟಕ ರಾಜ್ಯ ದಾರಿಮಿ ಉಲೆಮಾ ಒಕ್ಕೂಟದ ಕಾರ್ಯದರ್ಶಿ ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿ ಕಾರಿ ವಂ.ಚೇತನ್ ಲೋಬೊ, ಮಣಿಪಾಲ ಗುರುಧ್ವಾರದ ಗ್ಯಾನಿ ಬಲರಾಜ್ ಸಿಂಗ್ ಸೌಹಾರ್ದ ಸಂದೇಶಗಳನ್ನು ನೀಡಲಿದ್ದಾರೆ ಎಂದರು.
ಈ ಸಹಬಾಳ್ವೆ ಸಮಾವೇಶ ಅ.2ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಗ್ರಾಮಟ್ಟದಲ್ಲಿ ನಡೆಯಲಿದ್ದು, ಅ.2ರಂದು ರಾಜ್ಯಮಟ್ಟದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಸಮಿತಿಯ ವರೊನಿಕಾ ಕರ್ನೇಲಿಯೊ, ಸುಂದರ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ಫಾ.ವಿಲಿಯಂ ಮಾರ್ಟಿಸ್, ಪ್ರಶಾಂತ್ ಜತ್ತನ್ನ, ಇಬ್ರಾಹಿಂ ಕೋಟ, ಶ್ಯಾಮರಾಜ್ ಬಿರ್ತಿ, ಅಝೀಝ್ ಮುಂತಾದವರು ಉಪಸ್ಥಿತರಿದ್ದರು.