ಉಡುಪಿ: ಮಕ್ಕಳಿಗೆ ಎಳವೆಯಲ್ಲಿಯೇ ಕ್ರೀಡೆಯ ಬಗ್ಗೆ ಸರಿಯಾದ ಪ್ರೋತ್ಸಾಹ ಹಾಗೂ ತರಬೇತಿ ನೀಡಿದರೆ, ಮುಂದೆ ಅವರು ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಸಾಧ್ಯವಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ, ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಅಜ್ಜರಕಾಡಿನ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನಗಳ ಪ್ರಾಥಮಿಕ ಹಾಗೂ -ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗೆ ಪ್ರೋತ್ಸಾಹ ನೀಡುವುದು ಸರ್ಕಾರ ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ. ಮನುಷ್ಯನ ದೇಹ ಗಟ್ಟಿಯಾಗಿದ್ದರೆ ಮನಸ್ಸು ಗಟ್ಟಿಯಾಗಿರಲು ಸಾಧ್ಯ. ಇದರಿಂದ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಬಹುದಾಗಿದೆ. ಕೇವಲ ಓದು ಮಾತ್ರವಲ್ಲದೆ ಅದರೊಂದಿಗೆ ಕ್ರೀಡೆಗೂ ಸಮಯ ಮೀಸಲಿಡಬೇಕು. ಆಗ ದೇಶವನ್ನು ಪ್ರತಿನಿಧಿಸುವ ಶಕ್ತಿ ಮಕ್ಕಳಲ್ಲಿ ವೃದ್ಧಿಯಾಗುತ್ತದೆ ಎಂದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭಾ ಸದಸ್ಯೆ ರಶ್ಮಿಭಟ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ, ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಸ್. ರುದ್ರೇಗೌಡ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಸ್. ಮಧುಕರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ತಾರಾದೇವಿ, ಕಾಶಿನಾಥ್ ಪೈ, ಸುದರ್ಶನ್ ಉಪಸ್ಥಿತರಿದ್ದರು.
ಬ್ಯಾಡ್ಮಿಂಟನ್ ಸಂಘಟನಾ ಸಮಿತಿ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಸ್ವಾಗತಿಸಿದರು. ಗೋಪಾಲ ಕಾರ್ಯಕ್ರಮ ನಿರೂಪಿಸಿದರು.
ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಳಗಾವಿ, ಮೈಸೂರು, ಬೆಂಗಳೂರು ಹಾಗೂ ಕಲಬುರಗಿ ವಿಭಾಗದಿಮದ ಒಟ್ಟು 80 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.