ಬೆಂಗಳೂರು: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 8,11,050 ವಿದ್ಯಾರ್ಥಿಗಳ ಪೈಕಿ 5,82,316 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 2,28,734 ಅನುತ್ತೀರ್ಣರಾಗಿದ್ದಾರೆ.
ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ ಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.77.74 ಬಾಲಕಿಯರು ಹಾಗೂ ಶೇ. 66.41 ಬಾಲಕರು ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಉಡುಪಿ 7, ದಕ್ಷಿಣ ಕನ್ನಡಕ್ಕೆ 12 ಸ್ಥಾನ:
ಈ ಬಾರಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ ಎರಡು ಹಾಗೂ ಮಧುಗಿರಿ ಮೂರನೇ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಕಳಪೆ ಸಾಧನೆ ಮಾಡಿದೆ. ಕಳೆದ ಬಾರಿ ಐದನೇ ಸ್ಥಾನದಲ್ಲಿದ್ದ ಉಡುಪಿ ಈ ಬಾರಿ 7 ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಕನ್ನಡ 12 ನೇ ಸ್ಥಾನ ಗಳಿಸಿದೆ.
ರಾಜ್ಯದಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. 11 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದಿದ್ದಾರೆ. 43 ವಿದ್ಯಾರ್ಥಿಗಳು 623 ಅಂಕ ಸಂಪಾದಿಸಿದ್ದಾರೆ.