ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ ಶಿಖರ ಪ್ರತಿಷ್ಠಾ, ಬ್ರಹ್ಮಕಲಶಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳು ಮೇ.31ರಿಂದ ಮೊದಲ್ಗೊಂಡು ಜೂನ್.10ರ ವರೆಗೆ ನಡೆಯಲಿದೆ ಎಂದು ಪಲಿಮಾರು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂನ್.1ರಂದು ಸಂಜೆ 4 ಗಂಟೆಗೆ ಜೋಡುಕಟ್ಟೆಯಿಂದ ಉಡುಪಿ ಶ್ರೀಕೃಷ್ಣಮಠದ ವರೆಗೆ ಬೃಹತ್ ಶೋಭಯಾತ್ರೆ ನಡೆಯಲಿದೆ.
ಒಟ್ಟು 100ಕೆ.ಜಿಗಿಂತಲೂ ಅಧಿಕ ಸುವರ್ಣ, 800 ಕೆಜಿ ಬೆಳ್ಳಿ, 300 ಕೆಜಿ ತಾಮ್ರದ ಫಲಕಗಳಿಂದ ಕೂಡಿದ ಗೋಪುರವನ್ನು ಮಧ್ವ ಪೀಠಾಧಿಪತಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ
ಮೇ.31 ರಿಂದ ಜೂನ್.10 ರವರೆಗೆ ನಿರಂತರ ಧಾರ್ಮಿಕ, ಸಾಂಸ್ಕೃತಿಕ, ವಿವಿಧ ವಿಚಾರಗೋಷ್ಠಿ, ಚಿಂತನ-ಮಂಥನಗಳು ನಡೆಯಲಿವೆ. ನಾಡಿನ ವಿವಿಧ ಧಾರ್ಮಿಕ ವಿದ್ವಾಂಸರು, ಮಠದ ಯತಿಗಳು, ಅರಸ ಮನೆತನಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.
ವಿವಿಧ ಕಾರ್ಯಕ್ರಮಗಳ ವಿವರ:
ಮೇ.31- ಬೆಳಿಗ್ಗೆ 9 ಕ್ಕೆ ಗೋಪುರೋದ್ಘಾಟನಮ್,10ಕ್ಕೆ ದಾಸ ಸಾಹಿತ್ಯಗೋಪುರಂ, ಮಧ್ಯಾಹ್ನ 3ಕ್ಕೆ ಸಂಕೀರ್ತನ ಗೋಪುರಂ, ಸಾಯಂಕಾಲ 6ಕ್ಕೆ ಧರ್ಮಗೋಪುರಂ. ಜೂ. 1- ಬೆಳಗ್ಗೆ 7ಕ್ಕೆ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಮಂತ್ರ ಗೋಪುರಂ, ಬೆಳಗ್ಗೆ 9ಕ್ಕೆ ಸಂಸ್ಕೃತ ಗೋಪುರಂ-ಸಂಸ್ಕೃತ ಸಂಭಾಷಣ ಶಿಬಿರ, ಸಾಯಂಕಾಲ 6ಕ್ಕೆ ಧರ್ಮಗೋಪುರಂ-ಧರ್ಮಸಂದೇಶ ಹಾಗೂ ಜೂ.2- ಬೆಳಗ್ಗೆ 7ಕ್ಕೆ ಶ್ರೀ ಅನಂತಾಸನ ದೇವರ ಸನ್ನಿಧಿಯಲ್ಲಿ ಮಂತ್ರಗೋಪುರಂ-ವಿಷ್ಣು ಸಹಸ್ರನಾಮ-ಲಕ್ಷ್ಮೀ ಶೋಭಾನ ಪಾರಾಯಣ, ಬೆಳಗ್ಗೆ 9ಕ್ಕೆ ಜ್ಞಾನ-ವಿಜ್ಞಾನ ಗೋಪುರಂ- ಜ್ಞಾನ-ವಿಜ್ಞಾನ ಸಂದೇಶ, ಇಸ್ರೊ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 9:30ಕ್ಕೆ ದೇಸಿ ಗೊತಳಿ-ಗೋ ಸಮ್ಮೇಳನ- ಗೋಪುರಂ, ಸಾಯಂಕಾಲ 6ಕ್ಕೆ ಧರ್ಮಗೋಪುರಂ-ಧರ್ಮ ಸಂದೇಶ ನಡೆಯಲಿದೆ.
ಜೂ. 3-ಪೂರ್ವಾನ್ನ 8ಕ್ಕೆ ಚಂದ್ರೇಶ್ವರ ದೇವರ ಸನ್ನಿಧಿಯಲ್ಲಿ ಮಂತ್ರಗೋಪುರ ಲಕ್ಷ ಬಿಲ್ವರ್ಚನೆ, ರುದ್ರಾಭಿಷೇಕ, ಸಂಜೆ 4 ಗಂಟೆಗೆ ಬಾಲಗೋಪುರಂ ಚಿಣ್ಣರ ಸಂತರ್ಪಣ ಫಲಾನುಭವಿ ಮಕ್ಕಳ ಕಾರ್ಯಕ್ರಮ, 6ಕ್ಕೆ ಧರ್ಮೀಪುರಂ, ಧರ್ಮಸಂದೇಶ. ಜೂ. 4- ಮಧ್ಯಾಹ್ನ 2ಕ್ಕೆ ಶ್ರೀಕೃಷ್ಣ ಕಾವ್ಯಗೋಪುರಂ, ಸಾಯಂಕಾಲ 4ಕ್ಕೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸಾಯಂಕಾಲ 6ಕ್ಕೆ ಧರ್ಮಸಂದೇಶ. ಜೂ.5- ಬೆಳಗ್ಗೆ 9ಕ್ಕೆ ವಿದ್ವಾಂಸರ ಶಾಸ್ತ್ರೀಯಗೋಷ್ಠಿ, ಸಾಯಂಕಾಲ 6ಕ್ಕೆ ಧರ್ಮಸಂದೇಶ ಮತ್ತು ವಿಶ್ವ ಪರಿಸರ ದಿನ ಪ್ರಯುಕ್ತ ತುಳಸಿ ಸಸಿ ವಿತರಣೆ. ಜೂ. 6- ಬೆಳಗ್ಗೆ ಸುವರ್ಣಗೋಪುರ ಶಿಖರಪ್ರತಿಷ್ಠೆ, ರಥಬೀದಿಯಲ್ಲಿ ಸಂಕೀರ್ತ ನರ್ತನ ಸೇವೆ, ಸಾಯಂಕಾಲ 6ಕ್ಕೆ ಧರ್ಮಸಂದೇಶ, ಜೂ.9-ಶ್ರೀಕೃಷ್ಣ ದೇವರಿಗೆ ಅಷ್ಟಮಠದೀಶರಿಂದ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಕಾರ್ಯಕ್ರಮ ಮಧ್ಯಾಹ್ನ 11 ರಿಂದ ಅನ್ನ ಸಂತರ್ಪಣೆ ನೆರವೇರಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ
ಸುವರ್ಣ ಗೋಪುರ ಸಮರ್ಪಣಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟ್ಟಿ ಬಿಡುಗಡೆಗೊಳಿಸಿದರು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಉಪಸ್ಥಿತರಿದ್ದರು.












