ಶ್ರೀ‌ಗುರುನಾರಾಯಣ ಜಯಂತಿಗೆ‌ ಜನಪ್ರತಿನಿಧಿಗಳ ಅನುಪಸ್ಥಿತಿ; ಬಿಲ್ಲವ ಸಮಾಜ‌ ಬೇಸರ

ಉಡುಪಿ: ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನಡೆದ ಜಿಲ್ಲಾಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಜಿ.ಪ. ಅಧ್ಯಕ್ಷರೂ ಭಾಗವಹಿಸದೇ ಇರುವುದು‌ ಇಡೀ ಬಿಲ್ಲವ ಸಮಾಜಕ್ಕೆ ನೋವು ತಂದಿದೆ ಎಂದು ಬಿಲ್ಲವರ ಪರಿಷತ್ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆಯ ಬಂದರೆ ಬಿಲ್ಲವರ ಮತ ಬ್ಯಾಂಕ್ ಉದ್ದೇಶದಿಂದ ಒಲೈಕೆ ಮಾಡುತ್ತಾರೆ. ಆದರೆ ಇತರ ಮಹನೀಯರ ಜನ್ಮದಿನಾಚರಣೆಗಳಿಗೆ ತೋರುವ ಆಸಕ್ತಿ ಗುರುಜಯಂತಿಗೆ ತೋರಿಸದೆ ಇರುವುದು ನೋವು ತಂದಿದೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಾಗುವುದು ಬೇಡವೆಂದು ಉಡುಪಿ‌ ಜಿಲ್ಲೆಯ ಕೆಲ ಶಾಸಕರ ಸಹಿಯುಳ್ಳ ಅಧಿಕೃತ ಪತ್ರ ಮುಖ್ಯಮಂತ್ರಿ ಅವರಿಗೆ ನೀಡಿರುವುದು ಖಂಡನೀಯ. ಈ ತರಹದ ಬಹುಸಂಖ್ಯಾತ ಬಿಲ್ಲವರ ಮತದಿಂದ ಆಯ್ಕೆಯಾದ‌ ಶಾಸಕರ ಘನತೆಗೆ ಶೋಭೆಯಲ್ಲ ಎಂದ ಅವರು, ನಾಡಿನ ಸೌಹರ್ದ, ಸಹಬಾಳ್ವೆ ಬಯಸುವ ಬಿಲ್ಲವ ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ‌ ನಡೆದುಕೊಂಡರೆ ಜನಪ್ರತಿನಿಧಿಗಳ ಧೋರಣೆ ವಿರುದ್ಧ ಮುಂದೆ ಪ್ರತಿಭಟನೆ ಇಲ್ಲವೆ
ಮತ ಬಹಿಷ್ಕಾರಕ್ಕೆ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಬಿಲ್ಲವರ ಪರಿಷತ್ ಮಹಿಳಾ ಅಧ್ಯಕ್ಷೆ ಆಶಾ ಕಟಪಾಡಿ, ಕೋಶಾಧಿಕಾರಿ ಚಂದ್ರಹಾಸ, ಉಪಾಧ್ಯಕ್ಷ ಬದ್ರಿನಾಥ, ಸಂಘಟನಾಧ್ಯಕ್ಷ ರಮೇಶ್ ಅಂಚನ್, ವಿನೋದ್ ಅಮೀನ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು