ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನದ ಮಾರ್ಗವನ್ನು ಬದಲಾಯಿಸಿದ್ದು, ಇದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯಾವುದೇ ನೂಕುನುಗ್ಗಲು ಇಲ್ಲದೆ ಭಕ್ತರು ಕೂಡಲೇ ದೇವರ ದರ್ಶನ ಪಡೆಯಲು ಸಾಧ್ಯವಾಗಿದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಮಾರ್ಗದಿಂದ ಭಕ್ತರು ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಮೊದಲು ದೇವರ ದರ್ಶನ ಮಾಡಲು ಅರ್ಧ ಗಂಟೆ ತಗಲುತ್ತಿದ್ದರೆ, ಈಗ ಐದು ನಿಮಿಷದಲ್ಲಿ ದೇವರ ದರ್ಶನ ಪಡೆಯಬಹುದಾಗಿದೆ ಎಂದರು.
ಪ್ರಸ್ತುತ ಈ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಅನುಷ್ಠಾನಗೊಳಿಸಿದ್ದು, ಮುಂದೆ ಭಕ್ತರ ಸ್ಪಂದನೆ ನೋಡಿಕೊಂಡು ಶಾಶ್ವತವನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಭಕ್ತರ ಸಲಹೆ ಸೂಚನೆ ಪಡೆದುಕೊಂಡು ಬದಲಾವಣೆ ಮಾಡಲಾಗುವುದು. ಅಲ್ಲದೆ, ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.