ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಸೆ.11ರಂದು ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ಕೃಷ್ಣಮಠದ ರಥಬೀದಿಯಲ್ಲಿ ಸಂಪ್ರದಾಯದಂತೆ ಸಾಂಕೇತಿಕವಾಗಿ ಕೃಷ್ಣ ಜನ್ಮಾಷ್ಟಮಿ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಲಕ್ಷ ಚಕ್ಕುಲಿ, ಉಂಡೆ:
ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಇಲ್ಲದ್ದರಿಂದ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳ ಆಶಯದಂತೆ ಎಲ್ಲ ಭಕ್ತರಿಗೆ ಕೃಷ್ಣ ಪ್ರಸಾದ ಸಿಗಬೇಕು ಎಂಬ ಉದ್ದೇಶದಿಂದ ಮಠದಲ್ಲಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿ ತಯಾರಿಸಲಾಗುತ್ತಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಭಗವಂತ ಕೃಷ್ಣನನ್ನು ಸ್ಮರಿಸಿ:
ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಕೃಷ್ಣನ ವಿಶೇಷ ಚಿಂತನೆಗಳನ್ನು ಸ್ಮರಣೆ ಮಾಡಬೇಕು. ಇದರಿಂದ ನಮ್ಮಕಷ್ಟ ಕಾರ್ಪಣ್ಯಗಳು ದೂರ ಆಗಲಿದೆ. ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತೇವೆ. ಇಂತಹ ಕಾರ್ಯಗಳು ಭಗವಂತನ ಬಗ್ಗೆ ಸದಾ ಚಿಂತನ ನಡೆಸಲು ಸಹಕಾರಿ. ಮಕ್ಕಳಿಗೂ ಸಂಸ್ಕಾರ ಸಿಗುತ್ತದೆ. ಕೃಷ್ಣನನ್ನು ಅನುಸಂಧಾನ ಮಾಡುವ ಮೂಲಕ ಸಂಭ್ರಮಿಸೋಣ ಎಂದು ಪರ್ಯಾಯ ಅದಮಾರು ಮಠ ಈಶಪ್ರಿಯ ತೀರ್ಥ ಸ್ವಾಮೀಜಿ ಸಂದೇಶ ನೀಡಿದ್ದಾರೆ.