ಉಡುಪಿ: ಜಿಲ್ಲೆಯಲ್ಲಿ ಇಂದಿನಿಂದ (ಆ.5) ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯವರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ, ಸಾರ್ವಜನಿಕರಿಗೆ ಉಂಟಾಗುವ ಸಂಚಾರ ವ್ಯತ್ಯಯ ತಪ್ಪಿಸಲು ಮಾಡಲಾದ ವಿಶೇಷ ಬಸ್ಸುಗಳ ವ್ಯವಸ್ಥೆಗೆ
ಸಂಬಂಧಿಸಿದಂತೆ ಮಾಹಿತಿ ನೀಡಲು ಹಾಗೂ ದೂರುಗಳನ್ನು ಸ್ವೀಕರಿಸಲು ಮಣಿಪಾಲದ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ
ಕಛೇರಿಯಲ್ಲಿ ಮುಷ್ಕರ ಮುಗಿಯುವವರೆಗೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 0820-2575137, 9449864020 ಹಾಗೂ 7019244639 ಅನ್ನು ತೆರೆಯಲಾಗಿರುತ್ತದೆ.
ಉಡುಪಿ ಸರ್ಕಾರಿ ಬಸ್ ನಿಲ್ದಾಣ, ಕುಂದಾಪುರ ಸರ್ಕಾರಿ ಬಸ್ ನಿಲ್ದಾಣ ಹಾಗೂ ಕಾರ್ಕಳ ಸರ್ಕಾರಿ ಬಸ್ ನಿಲ್ದಾಣದಲ್ಲಿ ತಲಾ 5
ಬಸ್ಸುಗಳನ್ನು ಕಾಯ್ದಿರಿಸಲಾಗಿದ್ದು, ಈ ಸಂಬಂಧ ಹೆಚ್ಚುವರಿ ಬಸ್ಸುಗಳ ಅವಶ್ಯಕತೆ ಇದ್ದಲ್ಲಿ ಪ್ರೈವೇಟ್ ಬಸ್ ಅಸೋಶಿಯೇಶನ್ ವತಿಯಿಂದ ಖಾಸಗಿ ಬಸ್‌ಗಳ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಬಸ್ಸು ನಿಲ್ದಾಣದ ಹತ್ತಿರ ಇರುವ ಆಟೋ ಸ್ಟ್ಯಾಂಡ್‌ಗಳಲ್ಲಿ ಆಟೋ ವ್ಯವಸ್ಥೆ ಇದ್ದು ಪ್ರಯಾಣಿಕರಿಂದ ನಿಗದಿತ ಶುಲ್ಕವನ್ನೇ ಸ್ವೀಕರಿಸುವಂತೆ ಸೂಚಿಸಲಾಗಿರುತ್ತದೆ.
ಮುಷ್ಕರ ನಿರತ ಸಿಬ್ಬಂದಿಯವರಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತದಿಂದ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












