ಉಡುಪಿ: ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದರು.
ಮಣಿಪಾಲ ಸರಳೇಬೆಟ್ಟಿನ ಹೊಸ ಬೆಳಕು ಆಶ್ರಮದಲ್ಲಿ ಆಯೋಜಿಸಿದ ಅವೇ ಮಣ್ಣಿನ ಕಲಾಕೃತಿ ರಚನೆಯ ತರಬೇತಿ ಶಿಬಿರ ‘ಮಣ್ಣಿನ ಆಟ’ವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾವಿದರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಬೇಕು. ಇಂತಹ ಕಾರ್ಯಗಳು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಗೆ ಪ್ರೇರೇಪಣೆ ಆಗುತ್ತದೆ ಎಂದರು.
ಉಡುಪಿ ಆರ್ಟಿಸ್ಟ್ ಫಾರಂನ ಸಂಚಾಲಕ ರಮೇಶ್ ರಾವ್ ಮಾತನಾಡಿ, ಕಲಾವಿದರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಚಟುವಟಿಕೆಗಳ ಮೂಲಕ ಅಭಿವ್ಯಕ್ತಿಗೊಳಿಸಿದಾಗ ಅವರು ಕಲಿತ ವಿದ್ಯೆಗೆ ನ್ಯಾಯ ಸಿಗುತ್ತದೆ. ಅಲ್ಲದೆ, ಅವರು ಅದರಲ್ಲಿ ಸಾರ್ಥಕ ಮನೋಭಾವವನ್ನು ಕಾಣಬಹುದು ಎಂದು ಹೇಳಿದರು.
ಸ್ಯಾಂಡ್ ಆರ್ಟ್ ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರು ತಯಾರಿಸಿದ ‘ಆಹಾರ ಪದಾರ್ಥಗಳ ಪೋಲಾಗುವಿಕೆಯನ್ನು ತಡೆಗಟ್ಟುವ ಸಂದೇಶ ನೀಡುವ’ ವಿಶಿಷ್ಟ ಮಣ್ಣಿನ ಕಲಾಕೃತಿ ಎಲ್ಲರ ಗಮನ ಸೆಳೆಯಿತು.
ಹೊಸಬೆಳಕು ಸಂಸ್ಥೆಯ ಪೋಷಕ ಮಹೇಶ್ ಠಾಕೂರ್, ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಕಾರ್ಪೊರೇಷನ್ ಬ್ಯಾಂಕ್‌ನ ಕನಕರಾಜ್, ನಗರಸಭಾ ಸದಸ್ಯೆ ವಿಜಯಲಕ್ಷ್ಮೀ, ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ, ರವಿ ಹಿರೇಬೆಟ್ಟು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ವಾಹಕರಾದ ತನುಲಾ ತರುಣ್ ವಂದಿಸಿದರು. ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು.