ಬಹುನಿರೀಕ್ಷೆಯ ಧಾರ್ಮಿಕ ಉತ್ಸವ ನಾಡಹಬ್ಬ ಉಡುಪಿ ಪರ್ಯಾಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಅತೀ ಸರಳವಾಗಿ ನಡೆಸಲು ತೀರ್ಮಾನಿಸಿರುವುದಾಗಿ ಸಮಿತಿ ಕಾರ್ಯಾಧ್ಯಕ್ಷ ಕೆ ರಘುಪತಿ ಭಟ್ ಘೋಷಿಸಿದ್ದಾರೆ .
ಸಮಿತಿ ಗೌರವಾಧ್ಯಕ್ಷ ಕೆ ಸೂರ್ಯನಾರಾಯಣ ಉಪಾಧ್ಯಾಯರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ
ಶನಿವಾರ ರಾತ್ರಿ ನಡೆದ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ .
ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರ್ಣವಾಗಿ ಸಹಕರಿಸಬೇಕೆನ್ನುವ ಭಾವೀ ಪರ್ಯಾಯ ಶ್ರೀ ಕೃಷ್ಣಾಪುರ ಶ್ರೀಪಾದರ ಆಶಯದಂತೆ ಜನವರಿ 17 ರ ನಡುರಾತ್ರಿ ನಡೆಯಲಿರುವ ( 18 ರ ನಸುಕಿನ ವೇಳೆ) ನಡೆಯಲಿರುವ ಬಹುನಿರೀಕ್ಷೆಯ ಪರ್ಯಾಯೋತ್ಸವ ಮೆರವಣಿಗೆ ಮತ್ತು ನಂತರ ರಾಜಾಂಗಣದಲ್ಲಿ ನಡೆಯಲಿರುವ ಪರ್ಯಾಯ ದರ್ಬಾರ್ ಸಭೆಯನ್ನು ತೀರಾ ಸಾಂಪ್ರದಾಯಿಕತೆಗೆ ಆದ್ಯತೆ ನೀಡಿ ತೀರಾ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ .
ಈ ಕಾರ್ಯಕ್ರಮಗಳನ್ನು ವಿವಿಧ ಟಿ ವಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡಲಾಗುವುದು ಆದ್ದರಿಂದ ಭಕ್ತಾದಿಗಳು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ಸಹಕರಿಸಬೇಕೆಂದು ಭಕ್ತರು ಮತ್ತು ನಾಗರಿಕರಲ್ಲಿ ನಮ್ರರಾಗಿ ವಿನಂತಿಸುತ್ತೇವೆ .
ಆ ಹಿನ್ನೆಲೆಯಲ್ಲಿ ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಉತ್ಸವ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿದ್ದ ಜಾನಪದ ತಂಡಗಳನ್ನು ಮತ್ತು ಕೆಲವು ಟ್ಯಾಬ್ಲೋಗಳನ್ನು ರದ್ದುಪಡಿಸಿದ್ದೇವೆ . ಅಷ್ಟ ಮಠಾಧೀಶರು ಕುಳಿತುಕೊಳ್ಳುವ ಮೇನೆಯನ್ನು ಹೊತ್ತ ವಾಹನಗಳು , ವಾದ್ಯ ಚಂಡೆ , ಡೋಲು , ಬಿರುದಾವಳಿ ಮತ್ತು ಕೇವಲ ಪೌರಾಣಿಕ ದೃಶ್ಯಾವಳಿಗಳನ್ನೊಳಗೊಂಡ ಟ್ಯಾಬ್ಲೋಗಳು ಮಾತ್ರ ಮೆರಣಿಗೆಯಲ್ಲಿ ಇರುತ್ತವೆ . ಪರ್ಯಾಯ ದರ್ಬಾರ್ ಸಭೆಯಲ್ಲೂ ಸೀಮಿತ ಸಂಖ್ಯೆಯ ಆಸನ ವ್ಯವಸ್ಥೆ ಇರುತ್ತವೆ . ಇವುಗಳನ್ನು ಜನತೆ ಅಗತ್ಯವಾಗಿ ಗಮನಿಸಬೇಕು .
ಎರಡು ಕೋವಿಡ್ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಉತ್ಸವದಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗಿದೆ . ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ಬು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ . ಈ ನಿಟ್ಟಿನಲ್ಲಿ ಸಮಿತಿಯು ಜಿಲ್ಲಾಡಳಿತದೊಂದಿಗೆ ಪೂರ್ಣ ಸಹಕರಿಸಲಿದ್ದು ಜನತೆಯೂ ಸಹಕರಿಸುವಂತೆ ಮತ್ತೊಮ್ಮೆ ವಿನಂತಿಸುತ್ತೇವೆ ಎಂದು ಭಟ್ ತಿಳಿಸಿದ್ದಾರೆ.