ಉಡುಪಿ:ಹಳೆಯ ಸ್ಪ್ಲೆಂಡರ್ ನಲ್ಲಿ ಹೋಗಿ ಖರ್ದುಂಗ್ಲಾ ಶಿಖರವೇರಿದ್ದ ಅಪ್ಪ ಮಗನಿಗೆ 10 ಲಕ್ಷದ ಬೈಕ್ ಉಡುಗೊರೆ ನೀಡಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ

ಶಿರ್ವ: ತಮ್ಮ 25 ವರ್ಷ ಹಳೆಯ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ 17 ರಾಜ್ಯ ಸುತ್ತಿದಲ್ಲದೇ, 17,982 ಅಡಿ ಎತ್ತರವಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿದ್ದ ಶಿರ್ವದ ತಂದೆ ಮಗನ ಜೋಡಿಗೆ ಈಗ 10 ಲಕ್ಷ ರೂ ಮೌಲ್ಯದ ಹೀರೋ ಸೆಂಟಿನಿಯಲ್ ಬೈಕ್ ಬಹುಮಾನವಾಗಿ ಸಿಕ್ಕಿದೆ.

ಶಿರ್ವದ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ ಬೈಕ್ ನೀಡಿ ಗೌರವಿಸಲು ಮುಂದಾಗಿದ್ದು ಉಡುಪಿಯ ಶಕ್ತಿ ಹೀರೋ ಮೋಟಾರ್ಸ್ ಸಂಸ್ಥೆಯಲ್ಲಿ ಜೂನ್ 28ರಂದು ಹೀರೋ ಸೆಂಟಿನಿಯಲ್ ಬೈಕ್ ಹಸ್ತಾಂತರ ನಡೆಯಲಿದೆ.

ಪ್ರಜ್ವಲ್ ಶೆಣೈ ಅವರು 25 ವರ್ಷ ಹಳೆಯ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ಮೂಲಕ ದೇಶದ 17 ರಾಜ್ಯಗಳಲ್ಲಿ ಏಕಾಂಗಿಯಾಗಿ ಸುತ್ತಿದ್ದರು. ಕೆಲವೊಮ್ಮೆ ತನ್ನ ತಂದೆ ರಾಜೇಂದ್ರ ಶೆಣೈ ಅವರೊಂದಿಗೆ ಪ್ರಯಾಣಿಸಿ ಐದು ವರ್ಷಗಳಲ್ಲಿ ಸುಮಾರು 45,000 ದಿಂದ 50,000 ಕಿ.ಮೀ. ಕ್ರಮಿಸಿದ್ದಾರೆ. 19 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪಯಣಿಸಿದ್ದ ಅವರು, ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾದ ಮಾರ್ದೋಳ್ ದೇಗುಲ, ಪುರಿಯ ಜಗನ್ನಾಥ ದೇವಾಲಯ, ಶಿರಡಿ, ನಾಸಿಕ್ ಪಂಡರಾಪುರ, ಅಯೋಧ್ಯೆ ದೇಗುಲಗಳಿಗೆ ಭೇಟಿ ನೀಡಿದ್ದರು.

Oplus_131072

ಕನ್ನಡ ಬಾವುಟ ಹಾರಿಸಿದ್ದರು:

2024 ರ ಜೂನ್ ತಿಂಗಳಲ್ಲಿ ಅಪ್ಪ ಮಗ ಇಬ್ಬರು ಬೈಕ್ ಮೂಲಕ 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿಲೋ ಮೀಟರ್ ಪ್ರಯಾಣ ಬೆಳೆಸಿ, ಖರ್ದುಂಗ್ಲಾ ತಲುಪಿ ಕನ್ನಡ ಬಾವುಟ ಹಾರಿಸಿ ಭಾಷಾಭಿಮಾನ ಮೆರೆದಿದ್ದರು. 2025ರ ಫೆಬ್ರವರಿ ತಿಂಗಳಲ್ಲಿ 9 ದಿನಗಳ ಅವಧಿಯಲ್ಲಿ ಸುಮಾರು 4 ಸಾವಿರ ಕಿಲೋಮೀಟರ್ ಕ್ರಮಿಸಿ ಪ್ರಯಾಗ್ ರಾಜ್ ತಲುಪಿ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಹಿಂದಿರುಗಿದ್ದರು.