ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ‌ ಮನೋಭಾವ‌ ಬೆಳೆಸಿಕೊಳ್ಳಬೇಕು: ಡಾ. ಡೈಝಿವಾಸ್

ಉಡುಪಿ: ವಿದ್ಯಾರ್ಥಿಗಳು ಸೋಲು-ಗೆಲುವಿನ ಕಡೆಗೆ ಗಮನ ಹರಿಸದೇ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾ ಮನೋಭಾವ ಬೆಳಸಬೇಕು.‌ ಇದರಿಂದ ಉತ್ತಮ ಭವಿಷ್ಯದಲ್ಲಿ ರೂಪಿಸಿಕೊಳ್ಳಲು ಸಾಧ್ಯ ಎಂದು ಮಣಿಪಾಲ ಡಾ|ಟಿ ಎಂ‌. ಎ ಪೈ ಶಿಕ್ಷಣ ಕಾಲೇಜು ಇದರ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ|ಡೈಝಿ ವಾಸ್ ಹೇಳಿದರು.
ಅವರು ಶನಿವಾರ ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಡುಪಿ‌ ಜಿಲ್ಲಾ ಅಂತರ್ ಶಾಲಾ ಸಿಬಿಎಸ್ ಇ ಶಾಲೆಗಳ ಫುಟ್ ಬಾಲ್ ಪಂದ್ಯಾಟ “ ಕಿಕ್…ಆನ್ – 2019” ಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸಹಕಾರ ಮನೋಭಾವ ಹಾಗೂ ಇನ್ನೊಬ್ಬರ ಜೊತೆ ಬೆರೆಯುವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಸಂಚಾಲಕ ವಂ|ಡೆನಿಸ್ ಡೆಸಾ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನವನ್ನು ವಿಪರೀತ ಆಹಾರ ಸೇವನೆ, ಜಂಕ್ ಫುಡ್ ಉಪಯೋಗ, ಎಸಿ ಕೊಠಡಿಯಲ್ಲಿ ಹಾಗೂ ಕಂಪ್ಯೂಟರ್ ಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ.
ದೇಹಕ್ಕೆ ವ್ಯಾಯಾಮ ನೀಡುವ ವಿಚಾರದಲ್ಲಿ ಸಂಪೂರ್ಣ ಮರೆತು ಹೋಗಿದ್ದಾರೆ. ಕ್ರೀಡೆ ಆರೋಗ್ಯವನ್ನು ಬೆಳೆಸುವುದರಿಂದ ಜೀವನದಲ್ಲಿ ಸುಖಮಯವಾಗಿ ಬದುಕಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಶೈಕ್ಷಣಿಕ ವಿಚಾರದೊಂದಿಗೆ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲೆಯ 11 ಸಿಬಿಎಸ್ ಇ ಶಾಲೆಗಳ ವಿದ್ಯಾರ್ಥೀಗಳು ಅಂತರ್ ಶಾಲಾ ಸಿಬಿಎಸ್ ಇ ಶಾಲೆಗಳ ಫುಟ್ ಬಾಲ್ ಪಂದ್ಯಾಟ “ ಕಿಕ್…ಆನ್ – 2019” ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ, ಶಿರ್ವ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, 18 ಆಯೋಗಗಳ ಸಂಚಾಲಕ ಮೆಲ್ವಿನ್ ಆರಾನ್ಹಾ, ಶಾಲಾ ಆಡಳಿತ ಸಮಿತಿಯ ಜ್ಯೂಲಿಯನ್ ರೊಡ್ರಿಗಸ್, ಡಯಾನಾ, ಮೆಲ್ವಿನ್ ಡಿಸೋಜಾ, ನೊರ್ಬಟ್ ಮಚಾದೊ, ತ್ರಾಸಿ ಡಾನ್ ಬೊಸ್ಕೊ ಶಾಲೆ ವಂ|ಮ್ಯಾಕ್ಷಿಮ್ ಡಿಸೋಜಾ ಉಪಸ್ಥಿತರಿದ್ದರು.
ಪ್ರಿಯಾ ಡಿಂಪಲ್ ಸ್ವಾಗತಿಸಿ, ಸವಿತಾ ವಂದಿಸಿದರು.