ಉಡುಪಿ: ಮಾನಸಿಕ ಖಿನ್ನತೆ, ಏಕಾಂಗಿತನ, ಅಪನಂಬಿಕೆ, ಮದ್ಯಪಾನ ಇವು ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದ್ದು, ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು ಎಂದು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದರು.
ಉಡುಪಿಯಲ್ಲಿ ನಡೆದ ಶಾರದಾ ಆಟೊ ಮಾಲೀಕರ ಹಾಗೂ ಚಾಲಕರ ಸಂಘದ ಮಹಾಸಭೆಯಲ್ಲಿ ‘ವಿಶ್ವ ಆರೋಗ್ಯ ಸಂಸ್ಥೆಯ ಆತ್ಮಹತ್ಯೆ ನಿವಾರಣಾ ಅಭಿಯಾನ’ದ ಕುರಿತು ಮಾತನಾಡಿದರು.
ವರದಿಯೊಂದರ ಪ್ರಕಾರ ಶೇ. 30ರಷ್ಟು ಆತ್ಮಹತ್ಯೆ ಮದ್ಯಪಾನದಿಂದ ಸಂಭವಿಸುತ್ತಿದ್ದು, ಏಕಾಂಗಿತನ ಇದಕ್ಕೆ ಕಾರಣವಾಗಿದೆ. ಅಸಂಘಟಿತ ಕಾರ್ಮಿಕರ ಸಂಘಟನೆಗಳು, ಆಟೊ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ಮಧ್ಯೆ ಇರುವ ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಸಮಯದಲ್ಲಿ ಸಲಹೆ ಮಾರ್ಗದರ್ಶನ ನೀಡಿದರೆ, ಅವರನ್ನು ಆತ್ಮಹತ್ಯೆಯಿಂದ ರಕ್ಷಿಸಬಹುದಾಗಿದೆ ಎಂದರು.
ಶಾರದಾ ಯೂನಿಯನ್‌ನ ಅಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ತರ್ಜನಿ ಇನ್ಶೂರೆನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಸಾಮಂತ್, ವಕೀಲ ಪಿ.ಪಿ. ಭಟ್, ಸಂಘಟನೆಯ ಕಾರ್ಯಾಧ್ಯಕ್ಷ ರಘುನಂದನ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಉಪಾಧ್ಯಕ್ಷ ರವಿ ಪೂಜಾರಿ, ಕೋಶಾಧಿಕಾರಿ ಸುಭಾಸ್, ಕೇಶವ ಶೇರಿಗಾರ್ ಉಪಸ್ಥಿತರಿದ್ದರು. ಚಂದ್ರಶೇಖರ್ ಸ್ವಾಗತಿಸಿದರು. ಮಣೀಂದ್ರ ಚಕ್ರತೀರ್ಥ ಕಾರ್ಯಕ್ರಮ ನಿರೂಪಿಸಿದರು.












