ಉಡುಪಿ: ಶಾಂತಿಯುತ ಸಮಾಜ ನಿರ್ಮಾಣದಲ್ಲಿ ವಕೀಲರ ಹಾಗೂ ಕಾನೂನು ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಹೇಳಿದರು.
ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಒಂದು ದೇಶ, ಒಂದು ಸಂವಿಧಾನ- ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ನ್ಯಾಯ ದೊರಕಿಸಿ ಕೊಡುವ ಹಾಗೂ ನೆಲದ ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿ ವಕೀಲರ ಮೇಲಿದೆ ಎಂದರು.
ಕಾನೂನು ಇಲಾಖೆಯ ಉಪಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಕಾನೂನು ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಬೇಕು. ಇದರಿಂದ ಶಾಸನಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ರೋಚನಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಸ್ಮೃತಿ ಸುರೇಶ್ ವಂದಿಸಿದರು. ಜೋಯಾನ್ ವೆನೆಸ್ಸಾ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.