ಕುಂದಾಪುರ: ತಾಲೂಕು ಅಮಾಸೆಬೈಲು ಶಾಲೆಗೆ ಹೋಗುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತೆ ಬಾಲಕಿಯನ್ನು ರಿಕ್ಷಾದಲ್ಲಿ ಯಾವಾಗಲು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದ ರಿಕ್ಷಾ ಚಾಲಕ ಶರತ್ ಶೆಟ್ಟಿ ಮತ್ತು ಈತನ ಸ್ನೇಹಿತ ಪ್ರಶಾಂತ್ ನಾಯ್ಕ್ ಇವರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ನೊಂದ ಬಾಲಕಿ ಶಾಲೆಯ ಅಧ್ಯಾಪಕರಲ್ಲಿ ವಿಷಯವನ್ನು ತಿಳಿಸಿದಂತೆ ಶಾಲೆಯ ಅಧ್ಯಾಪಕರು ಈ ಬಗ್ಗೆ ದಿನಾಂಕ 15-07-2025 ರಂದು ಅಮಾಸೆಬೈಲ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಅಮಾಸೆಬೈಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವನ್ನು ಕುಂದಾಪುರ ಡಿವೈ.ಸ್.ಪಿ ಹೆಚ್.ಡಿ ಕುಲಕರ್ಣಿ ಇವರು ತನಿಖೆಯನ್ನು ನಡೆಸಿ 15 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರಾದ ಶರತ್ ಶೆಟ್ಟಿ, ತಂದೆ : ಭಾಸ್ಕರ ಶೆಟ್ಟಿ, ಮಚ್ಚಟ್ಟು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಮತ್ತು ಪ್ರಶಾಂತ್ ನಾಯ್ಕ್, ತಂದೆ : ಬಸವ ನಾಯ್ಕ್, ಮಚ್ಚಟ್ಟು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಮೇಲೆ ದೋಷಾರೋಪಣೆ ಪಟ್ಟಿಯನ್ನು ಉಡುಪಿಯ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ–FTSC-1 (POCSO ನ್ಯಾಯಾಲಯ) ಕ್ಕೆ ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯವು ಈ ಪ್ರಕರಣವನ್ನು ಎಸ್.ಸಿ ನಂಬರ್ 67/2025 ರಲ್ಲಿ ಸ್ವೀಕರಿಸಿಕೊಂಡು ತ್ವರಿತವಾಗಿ ವಿಚಾರಣೆ ನಡೆಸಿ ದಿನಾಂಕ 05-02-2026 ರಂದು ಆರೋಪಿತರಿಗೆ 5 ವರ್ಷ ಶಿಕ್ಷೆ ಮತ್ತು 5,000 ರೂ ದಂಡವನ್ನು ವಿಧಿಸಿ ಆದೇಶವನ್ನು ಹೊರಡಿಸಿರುತ್ತದೆ.
ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ , ಶ್ರೀ ಜಯರಾಮ ಶೆಟ್ಟಿ ಮತ್ತು ಶ್ರೀ ವೈ.ಟಿ ರಾಘವೇಂದ್ರ ರವರು ನೊಂದ ಬಾಲಕಿಯ ಪರವಾಗಿ ವಾದವನ್ನು ಮಂಡಿಸಿರುತ್ತಾರೆ.
















