ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ: ಅಪರ ಜಿಲ್ಲಾಧಿಕಾರಿ

ಉಡುಪಿ ಮಾ.2: ಭಾರತೀಯ ಸೇನೆಗೆ ಸೇರಲು ಇಚ್ಚಿಸುವ ಉತ್ಸಾಹಿ, ಬಾಗಲಕೋಟೆ, ವಿಜಯಪುರ, ಧಾರವಾಢ, ಉತ್ತರ ಕನ್ನಡ, ಉಡುಪಿ, ದ.ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ತರುಣರಿಗೆ, ಉಡುಪಿ ಜಿಲ್ಲೆಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಪ್ರಿಲ್ 4 ರಿಂದ 14 ರ ವರೆಗೆ ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ರ್ಯಾಲಿಯಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಸೇನಾ ನೇಮಕಾತಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 16 ರಿಂದ ಮಾರ್ಚ್ 20 ರ ವರೆಗೆ ಅವಕಾಶವಿದ್ದು, ಇದುವರೆಗೂ 15 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇದರಲ್ಲಿ ಹೊರ ಜಿಲ್ಲಾ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚಿದ್ದು, ಜಿಲ್ಲೆಯ ಯುವಕರ ಭಾಗವಹಿಸುವಿಕೆ ಕಡಿಮೆ ಇದೆ. ಸೇನೆಗೆ ಸೇರಿ ದೇಶ ಸೇವೆ ಮಾಡುವುದು ಗೌರವದ ವಿಚಾರ. ಸೇನೆಗೆ ಸೇರ್ಪಡೆಗೊಂಡ ಯುವಕರಿಗೆ ತರಬೇತಿಯ ಮೊದಲ ತಿಂಗಳಲ್ಲೇ 38 ಸಾವಿರ ರೂ. ಗಳ ವೇತನದ ಜೊತೆಗೆ ಹಲವು ರಿಯಾಯತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೂ ಜಿಲ್ಲೆಯ ಯುವಕರಲ್ಲಿ ಸೇನೆಗೆ ಸೇರುವ ಬಗ್ಗೆ ಆಸಕ್ತಿ ಕಂಡು ಬರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಯುವಕರು ಸೇನಾ ನೇಮಕಾತಿ ರ್ಯಾಲಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲು ಈ ಬಾರಿ ಉಡುಪಿಯಲ್ಲೇ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೇರೇಪಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೇನಾ ರ್ಯಾಲಿಯಲ್ಲಿ, ಬಾಗಲಕೋಟೆ, ವಿಜಯಪುರ, ಧಾರವಾಢ, ಉತ್ತರ ಕನ್ನಡ, ಉಡುಪಿ, ದ.ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕನಿಷ್ಠ 30 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಯೋಮಿತಿ 17 ರಿಂದ 23 ವರ್ಷ ಒಳಗಿನ ಅವಿವಾಹಿತ ಯುವಕರಿಗೆ ಸೋಲ್ಜರ್ ಜನರಲ್ ಡ್ಯೂಟಿ (ಆಲ್ ಆಮ್ರ್ಸ್), ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ ನರ್ಸಿಂಗ್ ಅಸಿಸ್ಟೆಂಟ್/ ನರ್ಸಿಂಗ್ ಸಹಾಯಕ ಪಶುವೈದ್ಯ, ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ (ಆಲ್ ಆಮ್ರ್ಸ್), 10 ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟ್ರೇಡ್ಸ್ಮನ್ (ಆಲ್ ಆಮ್ರ್ಸ್), ಮತ್ತು 8 ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟೇಡ್ನ್ಮನ್ (ಆಲ್ ಆಮ್ರ್ಸ್) ಹುದ್ದೆಗಳು ಲಭ್ಯವಿದ್ದು ಆನ್‍ಲೈನ್ ಮೂಲಕ www.joinindianarmy.nic.in ನಲ್ಲಿ ಹೆಸರು ನೋಂದಾಯಿಸಬಹುದಾಗಿದ್ದು. ಆನ್‍ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 20 ರ ವರೆಗೆ ಅವಕಾಶವಿರುತ್ತದೆ. ಆನ್‍ಲೈನ್ ಮೂಲಕ ನೋಂದಾಯಿಸಲ್ಪಟ್ಟ ಅಭ್ಯರ್ಥಿಗಳಿಗೆ ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ರ್ಯಾಲಿಯಲ್ಲಿ ಭಾಗವಹಿಸಲು ಅಡ್ಮಿಟ್ ಕಾರ್ಡ್ ಕಡ್ಡಾಯವಾಗಿದ್ದು, ಮಾರ್ಚ್ 24 ರಂದು ಕಾರ್ಡ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಸೇನಾ ನೇಮಕಾತಿಯ ನಿರ್ದೇಶಕ ಕರ್ನಲ್ ಫಿರ್ಧೋಶ್ ಪಿ  ದುಬಾಶ್ ಮಾಹಿತಿ ನೀಡಿದರು.

ರ್ಯಾಲಿಯ ದಿನ ಅಭ್ಯರ್ಥಿಗಳಿಗೆ ಬೆಳಗಿನ ಉಪಹಾರ, ತಂಗುವ ವ್ಯವಸ್ಥೆ, ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ, ಸ್ವಚ್ಚತೆ, ಶ್ಯಾಮಿಯಾನ, ಬ್ಯಾರಿಕೇಡ್ ಅಳವಡಿಕೆ, ಲೈಟ್ ವ್ಯವಸ್ಥೆ, ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಮತ್ತು ಅಗ್ನಿಶಾಮಕ ವ್ಯವಸ್ಥೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ನಿಯೋಜನೆ ಸೇರಿದಂತೆ ಹತ್ತು ಹಲವು ವ್ಯವಸ್ಥೆಗಳ ಒಗದಿಸುವಂತೆ ಅಪರ ಜಿಲ್ಲಾಧಿಕಾರಿಗಳು ವಿವಿಧ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಎಎಸ್‍ಪಿ ಕುಮಾರ್‍ಚಂದ್ರ, ಮಂಗಳೂರಿನ ಸೈನಿಕ ಕಲ್ಯಾಣ ಇಲಾಖೆಯ ಬಿ.ಆರ್ ಶೆಟ್ಟಿ, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆಯ ಸಹ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ನಗರ ಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸೇನಾ ಆರ್‍ಎಂಓ ಕರ್ನಲ್ ಮನೀಶ್ ಮತ್ತಿತರರು ಉಪಸ್ಥಿತರಿದ್ದರು.