ಕಾರ್ಕಳ: ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಗೋದಾಮಿಗೆ ಹೋಗಲು ರಾ.ಹೆ 169 ಮುರತಂಗಡಿ ಸರ್ವಿಸ್ ರಸ್ತೆಯಿಂದ ಸಂಪರ್ಕ ರಸ್ತೆ ನಿರ್ಮಾಣವು ಡಿಸೆಂಬರ್ 19 ರಂದು ಪೂರ್ಣಗೊಂಡಿದೆ.
ಸದ್ಯಕ್ಕೆ ತಾತ್ಕಾಲಿಕವಾಗಿ ವಾಹನಗಳಿಗೆ ಮತ್ತು ಗ್ರಾಹಕರಿಗೆ ಸರಾಗವಾಗಿ ಸಂಚರಿಸಲು ಅನುಕೂಲವಾಗಿದೆ. ಕಳೆದ ಕೆಲವು ದಿನಗಳಿಂದ ಮುರತಂಗಡಿ ಪರಿಸರದ ಸರ್ವಿಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸಾಣೂರು ಸೊಸೈಟಿಗೆ ಹೋಗುವ ಸಂಪರ್ಕ ರಸ್ತೆ ಕಡಿತವಾಗಿತ್ತು. ಸೊಸೈಟಿಗೆ ಪ್ರತಿನಿತ್ಯ ಬರುವ ನೂರಾರು ಗ್ರಾಹಕರಿಗೆ ಇದರಿಂದಾಗಿ ತೀವ್ರ ತೊಂದರೆಯಾಗಿತ್ತು. ಸ್ವಲ್ಪ ತಡವಾಗಿಯಾದರೂ ಜನರ ಒತ್ತಡಕ್ಕೆ ಮಣಿದು ಹೆದ್ದಾರಿ ಇಲಾಖೆ ಅಗತ್ಯವಾಗಿದ್ದ ಸಂಪರ್ಕ ರಸ್ತೆಯ ನಿರ್ಮಾಣ ಮಾಡಿರುತ್ತದೆ.
ಸಾಣೂರು ಸೊಸೈಟಿ ಕಟ್ಟಡದ ಮುಂಭಾಗದಲ್ಲಿ ಬೃಹತ್ ಗಾತ್ರದ ಆಲದ ಮರದ ಪಕ್ಕದಲ್ಲಿ ಮುರತಂಗಡಿ ಸರಕಾರಿ ಶಾಲೆಗೆ ಹೋಗುವ ಅಗಲಕಿರಿದಾದ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ಸುರಕ್ಷಿತ ಅಂತರಕ್ಕೆ ಸ್ಥಳಾಂತರಿಸಿ ರಸ್ತೆ ಅಗಲೀಕರಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು ಕೂಡಾ. ಆದರೆ ಹೆದ್ದಾರಿ ಇಲಾಖೆ ವಿಳಂಬ ಗತಿಯ ಧೋರಣೆಗೆ ಜೋತು ಬಿದ್ದಿತ್ತು .
ಅಗಲ ಕಿರಿದಾದ ಅಡ್ಡರಸ್ತೆ:
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯನ್ನು ಸಂಪರ್ಕಿಸುವ ಮುರತ್ತಂಗಡಿಯ ಈ ಅಗಲ ಕಿರಿದಾದ ರಸ್ತೆಯಲ್ಲಿ ಸಾಣೂರು ಮುದ್ದಣ್ಣ ನಗರ ಕಡೆಯಿಂದ ನೂರಾರು ಜನ ಮತ್ತು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿದ್ದು , ಸಾಣೂರು ಗ್ರಾಮ ಪಂಚಾಯತ್ ವಿಶೇಷ ಮುತುವರ್ಜಿ ವಹಿಸಿ ಅಕ್ಕಪಕ್ಕದ ಭೂ ಮಾಲಕರ ಮನವೊಲಿಸಿ ರಸ್ತೆಯ ಅಗಲೀಕರಣವಾಗದಿದ್ದರೆ ಸರ್ವಿಸ್ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಅಡ್ಡರಸ್ತೆಯಿಂದ ಬರುವ ವಾಹನಗಳ ಅರಿವಿಲ್ಲದೆ ದಿನನಿತ್ಯ ಅಪಘಾತಗಳು ಸಂಭವಿಸುವ ಅಪಾಯವಿದೆ
ಜನರ ಸುರಕ್ಷತೆಗೆ ಪ್ರಾಶಸ್ತ್ಯ:
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅರ್ದಂಬರ್ಧ ಕಾಮಗಾರಿಯಿಂದಾಗಿ ಜನರ ಸುರಕ್ಷತೆಗೆ ತೊಂದರೆ ಆಗದಂತೆ ಸ್ಥಳೀಯ ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಮೇಲೆ ಒತ್ತಡವನ್ನು ತರಬೇಕೆಂದು ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರು ಮತ್ತು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಒತ್ತಾಯಿಸಿದ್ದಾರೆ.















