ಉಡುಪಿ: ಸಂಗೀತ ಮತ್ತು ಸಾಹಿತ್ಯವನ್ನು ಏಕಾಗ್ರತೆಯಿಂದ ಹೆಚ್ಚು ಕ್ರಿಯಾಶೀಲರಾಗಿ ಅಭ್ಯಾಸ ಮಾಡುವುದರಿಂದ ಜೀವನದಲ್ಲಿ ಸಾಧನೆಯ ಗುರಿ ಮುಟ್ಟಬಹುದು ಎಂದು ಸಂಗೀತ ವಿದ್ವಾಂಸ ಉಡುಪಿ ನಾದ ವೈಭವಂನ ವಾಸುದೇವ ಭಟ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪ ರತ್ನ ಪ್ರತಿಷ್ಠಾನ ಕೊಡವೂರು ಇದರ ಸಂಯುಕ್ತ ಆಶ್ರಯದಲ್ಲಿ ಕೊಡವೂರು ಭಾಮ ಆರ್ಟ್ ಗ್ಯಾಲರಿಯಲ್ಲಿ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಸಾಹಿತಿ ಬೆಳಗೋಡು ರಮೇಶ್ ಭಟ್ ಮಾತನಾಡಿ, ಕವಿತೆ ಹುಟ್ಟಲು ನಿರ್ದಿಷ್ಟ ಸಮಯ ಇಲ್ಲ. ಆಯಾ ಕಾಲದ, ಆಯಾ ಸಂದರ್ಭದ ಒತ್ತಡ, ಸಂಭ್ರಮ, ವಿಷಾದಗಳಲ್ಲಿ ಕವಿತೆ ಹುಟ್ಟಿಕೊಳ್ಳುತ್ತದೆ. ಪುರಾಣ ಕಾಲದ ಕತೆಗಳು ಇವತ್ತಿನ ಘಟನೆಗಳಿಗೆ ಸಮೀಪಿಕರಿಸಿದಾಗಲೂ ಕತೆ ಹುಟ್ಟಿಕೊಳ್ಳುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ನಗರಸಭಾ ಸದಸ್ಯ ವಿಜಯ ಕೊಡವೂರು, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಬ್ರಹ್ಮಾವರ ಘಟಕದ ಸೂರಾಲು ನಾರಾಯಣ ಮಡಿ, ಸಾಹಿತಿಗಳಾದ ಅಗ್ರಹಾರ ಭಾಸ್ಕರ ಭಟ್, ವಸಂತಿ ಶೆಟ್ಟಿ ಬ್ರಹ್ಮಾವರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾದವೈಭವಂ ಉಡುಪಿ ವಾಸುದೇವ ಭಟ್ ಅವರನ್ನು ಅಭಿನಂದಿಸಲಾಯಿತು. ಪೂರ್ಣಿಮಾ ಜನಾರ್ದನ ಸ್ವಾಗತಿಸಿದರು. ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಆಚಾರ್ಯ ವಂದಿಸಿದರು.