ಉಡುಪಿ; ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರಿಗೆ ದೇಶದಲ್ಲಿಂದು ಗೌರವ ಹೆಚ್ಚಾಗುತ್ತಿದೆ ಎಂದು ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ರಘುಪತಿ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸೈನಿಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಸದಸ್ಯೆಯರಿಂದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಸಲ್ಲಿಸಲಾದ ಗೌರವಾರ್ಪಣೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಸೈನಿಕರ ಬಗ್ಗೆ ಸಾರ್ವಜನಿಕರಲ್ಲಿ ಹೆಮ್ಮೆಯನ್ನು ಕಾಣುತ್ತಿದ್ದೇವೆ. ಮೋದಿ ಅವರು ಮಾಜಿ ಸೈನಿಕರಿಗೆ ಅನೇಕ ಸೌಲಭ್ಯಗಳನ್ನು, ಸಮಾನ ಹುದ್ದೆಗೆ ಸಮಾನ ವೇತನ ಎಂಬ ಯೋಜನೆಯನ್ನು ಅವರು ಜಾರಿಗೊಳಿಸುತ್ತಿದ್ದಾರೆ. ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದ ಅವರು ದೇಶದ ಯಾವುದೋ ಮೂಲೆಯಲ್ಲಿ ಗುರುತು ಪರಿಚಯ ಇಲ್ಲದೇ ಸೇವೆ ಸಲ್ಲಿಸಿದ ತಮ್ಮಂತಹ ನಿವೃತ್ತರಿಗೆ ಊರಿನ ಜನರು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅವರು, ಕಾರ್ಗಿಲ್ ಯುದ್ದದ ಗೆಲುವು, ಬಾರತ ದೇಶದ ಗೆಲುವು, ಇದರ ಪೂರ್ಣ ಶ್ರೇಯಸ್ಸು ನಮ್ಮ ವೀರ ಸೈನಿಕರಿಗೆ ಸಲ್ಲಬೇಕು, ನಮ್ಮ ಸೈನಿಕರು ನಮ್ಮ ದೇಶ ಇಡೀ ವಿಶ್ವದಲ್ಲಿಯೇ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷೆ ನಯನಾ ಗಣೇಶ್ ಅವರು, ತಮ್ಮ ಬದುಕನ್ನೇ ಪಣವಾಗಿಟ್ಟುಕೊಂಡು ದೇಶವನ್ನು ಕಾಯುತ್ತಿರುವ ಸೈನಿಕರಿಂದಾಗಿಯೇ ನಾವಿಂದು ಸಮಾಜದಲ್ಲಿ ನಿಶ್ಚಿಂತೆಯಿಂದ ಬದುಕುತ್ತಿದ್ದೇವೆ. ಸೈನಿಕರು ಕೇವಲ ಗಡಿ ಕಾಯುವುದಲ್ಲ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಅವರು ಮಾಡುವ ನಿಸ್ವಾರ್ಥ ಸೇವೆ ಅನನ್ಯವಾದುದು, ಅವರಿಗೆ ಸಮಾಜ ಸದಾ ಚಿರಋಣಿಯಾಗಿರಬೇಕು ಎಂದರು.
ವೇದಿಕೆಯಲ್ಲಿ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಗಣೇಶ್ ರಾವ್, ಹಿರಿಯ ನಿವೃತ್ತ ಸೈನಿಕರಾದ ಗಣಪಯ್ಯ ಶೇರಿಗಾರ್, ಸಾಧು ಕುಂದರ್, ರಾಜ್ಯ ಮಹಿಳಾ ಮೋರ್ಚದ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಮುಂತಾದವರಿದ್ದರು.