ಉಡುಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕನವರ ಕುರಿತು ರಂಗ ನಿರ್ದೇಶಕ ಎಚ್.ಪಿ. ರವಿರಾಜ್ ಪರಿಕಲ್ಪನೆಯಲ್ಲಿ ಮೂಡಿಬಂದ ‘ಸಾಲುಮರಗಳ ಕಾವ್ಯ–ತಿಮ್ಮಕ್ಕ’ ಸಾಕ್ಷ್ಯಚಿತ್ರವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಾವಿದ ಮಹೇಶ್ ಮಲ್ಪೆ ಅವರು ರುಬಿಕ್ ಕ್ಯೂಬ್‌ನಲ್ಲಿ ರಚಿಸಿದ ಸಾಲುಮರದ ತಿಮ್ಮಕ್ಕನವರ ಚಿತ್ರವನ್ನು ಅನಾವರಣಗೊಳಿಸಲಾಯಿತು. ಉಡುಪಿಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಾಲುಮರದ ತಿಮ್ಮಕ್ಕ ಹಾಗೂ ಅವರ ದತ್ತು ಪುತ್ರ ಬಿ.ಎನ್. ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ಆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನವನ್ನು ಉದ್ಘಾಟಿಸಿ, ಭಾವನಾ ಕೆರೆಮಠ ಅವರ ‘ಬಿಂಬದೊಳಗಿನ ಅರ್ಥ’ ಮಕ್ಕಳ ನಾಟಕ ಕೃತಿಯನ್ನು ಲೋರ್ಕಾಪಣೆಗೊಳಿಸಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ, ಅಪ್ನಾ ಹಾಲಿಡೇಸ್ ನಿರ್ದೇಶಕ ಎಂ. ಅಶ್ವಿನ್ ಹೆಬ್ಬಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಭಾವನಾ ಕೆರೆಮಠ ಉಪಸ್ಥಿತರಿದ್ದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಕೆ. ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಸ್ವಾಗತಿಸಿ, ಅವಿನಾಶ್ ಕಾಮತ್ ಮತ್ತು ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು.












