udupixpress
Home Trending ಉಡುಪಿಯ 'ರಾಯಲ್ ಮಹಲ್' ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿತ: ತಪ್ಪಿದ ಭಾರೀ ದುರಂತ

ಉಡುಪಿಯ ‘ರಾಯಲ್ ಮಹಲ್’ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿತ: ತಪ್ಪಿದ ಭಾರೀ ದುರಂತ

ಉಡುಪಿ: ಚಿತ್ತರಂಜನ್ ಸರ್ಕಲ್ ಬಳಿಯ ಸುಮಾರು ಐವತ್ತು ವರ್ಷದ ಹಳೆಯ ರಾಯಲ್ ಮಹಲ್ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿದಿದ್ದು, ಅದೃಷ್ಟವಶಾತ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಏಕಾಏಕಿಯಾಗಿ ಕಟ್ಟಡ ಕುಸಿದು ಬಿದಿದ್ದು, ಕಟ್ಟಡ ಕುಸಿದು ಬೀಳುವ ಸದ್ದು ಕೇಳಿ ತಳಮಹಡಿಯಲ್ಲಿದ್ದ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಚಿಪ್ಸ್ ಬೇಕರಿ ಅಂಗಡಿಯ ಸಿಬ್ಬಂದಿ ಹೊರಗಡೆ ಓಡಿ ಬಂದಿದ್ದಾರೆ. ಹಾಗಾಗಿ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಕಟ್ಟಡದ ಒಂದು ಭಾಗ ಸಂಪೂರ್ಣ ಕುಸಿದಿರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ ಹಳೆ ಕಟ್ಟಡ ಆಗಿರುವುದರಿಂದ ಇನ್ನೂ ಹೆಚ್ಚಿನ ಭಾಗ ಕುಸಿಯುವ ಆತಂಕವಿದೆ. ಆದ್ದರಿಂದ ಅಗ್ನಿಶಾಮಕದ ಸಿಬ್ಬಂದಿ ತಳಮಹಡಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ.

ಕಟ್ಟಡ ಕುಸಿದ ಪರಿಣಾಮ ಪಕ್ಕದಲ್ಲೇ ಇದ್ದ ಜಿಒಎಸ್‌ ಕಂಬಕ್ಕೆ ಹಾನಿಯಾಗಿದೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕಟ್ಟಡದ ಕೆಲಮಹಡಿಯಲ್ಲಿರುವ ಹೋಟೆಲ್ ನ್ಯೂ ದ್ವಾರಕದಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರಿಗೆ ಕಟ್ಟಡದ ಅವಶೇಷಗಳು ತಾಗಿ ಸಣ್ಣಪುಟ್ಟ ಗಾಯವಾಗಿದೆ. ಕಟ್ಟಡ ಬೀಳುವ ಶಬ್ದದಿಂದ ಆತಂಕಗೊಂಡು ಮಹಿಳೆ ಹೊರಗಡೆ ಓಡಿಬಂದಿದ್ದು, ಬರುವಾಗ ಮಣ್ಣಿನ ಮೇಲೆ ಕಾಲು ಹಾಕಿ ಜಾರಿ ಬಿದ್ದಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಆಗಿಶಾಮಕ ದಳ, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜನ ಔಷಧ ಕೇಂದ್ರದ ಸಿಬ್ಬಂದಿಯನ್ನು ಹೊರಗಡೆ ಕಳುಹಿಸಿದ್ದಾರೆ.

ತಪ್ಪಿದ ಭಾರೀ ಅನಾಹುತ:
ರಾಯಲ್ ಮಹಲ್ ಕಟ್ಟಡದ ಎದುರಿಗೆ ಟೆಂಪೋ ಸ್ಟ್ಯಾಂಡ್ ಇದ್ದು, ಸದಾ ಟೆಂಪೋ ಚಾಲಕರು ತಮ್ಮ ಟೆಂಪೋ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದರು. ಆದರೆ ಅದೃಷ್ಟವಶಾತ್ ಕಟ್ಟಡ ಕುಸಿಯುವ ವೇಳೆ ಯಾವುದೇ ಟೆಂಪೋ ನಿಲ್ಲಿರಲಿಲ್ಲ. ಹಾಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

 

ಹಳೆಯ ಕಟ್ಟಡಗಳಿಗೆ ನೋಟಿಸ್:
ಕಟ್ಟಡ ಕುಸಿತ ಸ್ಥಳಕ್ಕೆ ಉಡುಪಿ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಭೇಟಿ ನೀಡಿದ್ದು, ಕಟ್ಟಡ ಐವತ್ತು ವರ್ಷಕ್ಕಿಂತಲೂ ಹಳೆಯದಾಗಿದೆ. ಸದ್ಯ ಕಟ್ಟಡದ ಒಂದು ಭಾಗ ಕುಸಿದಿದ್ದು, ಉಳಿದ ಭಾಗವೂ ಕುಸಿಯುವ ಸಂಭವವಿದೆ. ಹಾಗಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡುವಂತೆ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ನಗರದಲ್ಲಿರುವ ಹಳೆಯ ಹಾಗೂ ನಿರ್ವಹಣೆ ಇಲ್ಲದ ಕಟ್ಟಡಗಳನ್ನು ಗುರುತಿಸಿ, ಕೂಡಲೇ ತೆರವು ಮಾಡುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ತಪ್ಪಿದ್ದಲ್ಲಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.