ಉಡುಪಿ, ಮೇ 30: ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಜೂ.1ರಂದು ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಶೋಭಾಯಾತ್ರೆ ನಡೆಯಲಿರುವುದರಿಂದ ಅಂದು ಉಡುಪಿ ನಗರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಅಂದು ಸಂಜೆ 4ರಿಂದ ರಾತ್ರಿ ಸುಮಾರು 9 ಗಂಟೆಯವರೆಗೆ ಸಂಚಾರ ಬದಲಾವಣೆ ಇರುತ್ತದೆ ಎಂದು ಎಸ್‌ಪಿ ನಿಶಾ ಜೇಮ್ಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
••ಶೋಭಾಯಾತ್ರೆ ಜೋಡುಕಟ್ಟೆಯಿಂದ ಹೊರಡುವ ವೇಳೆ ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣದಿಂದ ಮಂಗಳೂರು, ಕಟಪಾಡಿ, ಅಂಬಲಪಾಡಿ ಕಡೆಗೆ ಹೋಗುವ ಎಲ್ಲ ಬಸ್ಸುಗಳು ಶಿರಿಬೀಡು, ಬನ್ನಂಜೆ, ಕರಾವಳಿ ಮೂಲಕ ಅಂಬಲಪಾಡಿ ಮಾರ್ಗವಾಗಿ ಹೋಗಬೇಕು. ಮಂಗಳೂರು ಕಡೆಯಿಂದ ಉಡುಪಿಗೆ ಬರುವ ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳು ಅಂಬಲಪಾಡಿ ಕರಾವಳಿ ಜಂಕ್ಷನ್ ಮೂಲಕ ಉಡುಪಿಗೆ ಬರಬೇಕು.
••ಜೋಡುಕಟ್ಟೆಯಿಂದ ತ್ರಿವೇಣಿ ವೃತ್ತದವರೆಗೆ ಏಕಮುಖ ಸಂಚಾರವನ್ನು ದ್ವಿಮುಖ ಮಾರ್ಗವಾಗಿ ಮಾರ್ಪಾಡು ಮಾಡಲಾಗಿದ್ದು ಶೋಭಾಯಾತ್ರೆ ಜೋಡುಕಟ್ಟೆಯಿಂದ ಬರುವ ಎಡಭಾಗದ ರಸ್ತೆಯಲ್ಲಿ ಸಾಗುವುದರಿಂದ ಬಲಭಾಗದ ರಸ್ತೆಯನ್ನು ದ್ವಿಮುಖ ಮಾರ್ಗವಾಗಿ ಮಾರ್ಪಾಡು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
••ಶೋಭಾಯಾತ್ರೆ ಕಿದಿಯೂರು, ಶಿರಿಬೀಡು ಜಂಕ್ಷನ್‌ಗೆ ಬಂದಾಗ ಕುಂದಾಪುರದಿಂದ ಉಡುಪಿಗೆ ಬರುವ ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳು ಕರಾವಳಿ, ಅಂಬಲಪಾಡಿ, ಬ್ರಹ್ಮಗಿರಿ, ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು.
ಈ ಸಮಯದಲ್ಲಿ ಕುಂದಾಪುರದಿಂದ ಮಣಿಪಾಲಕ್ಕೆ ಹೋಗುವ ವಾಹನ ಸವಾರರು ಅಂಬಾಗಿಲು, ಕಲ್ಸಂಕ ಮಾರ್ಗವಾಗಿ ಹೋಗಬೇಕು. ಮಂಗಳೂರಿನಿಂದ ಬರುವ ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳು ಕಿನ್ನಿಮೂಲ್ಕಿ ಸ್ವಾಗತ ಗೋಪುರ ಜೋಡುಕಟ್ಟೆ ಮೂಲಕ ಉಡುಪಿಗೆ ಬರಬೇಕು.
••ಶೋಭಾಯಾತ್ರೆಯು ಶಿರಿಬೀಡು ಜಂಕ್ಷನ್‌ನಿಂದ ಕಲ್ಸಂಕದವರೆಗೆ ಬಲಭಾಗದ ರಸ್ತೆಯಲ್ಲಿ ಸಾಗುವುದರಿಂದ ಎಡಭಾಗದ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಶೋಭಾಯಾತ್ರೆ ಸಿಟಿಬಸ್ ನಿಲ್ದಾಣಕ್ಕೆ ಬಂದಾಗ ಮಣಿಪಾಲದಿಂದ ಉಡುಪಿಗೆ ಬರುವ ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳು ಎಸ್‌ಕೆಎಂ (ಶಾರದಾ ಕಲ್ಯಾಣ ಮಂಟಪ) ಜಂಕ್ಷನ್ ಮೂಲಕ ಬೀಡಿನಗುಡ್ಡೆ, ಚಿಟ್ಪಾಡಿ, ಮಿಷನ್ ಕಾಂಪೌಂಡ್, ಲಯನ್ಸ್ ಸರ್ಕಲ್ ಮೂಲಕ ಉಡುಪಿಗೆ ಬರಬೇಕು.
••ಲಯನ್ಸ್ ವೃತ್ತದಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಹಾಗೂ ಶಿರಿಬೀಡು ಜಂಕ್ಷನ್‌ನಿಂದ ಕಲ್ಸಂಕದವರೆಗೆ ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.