ಉಡುಪಿ: ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ

ಉಡುಪಿ: ಜಿಲ್ಲೆಯಲ್ಲಿ ಬಡವರು ಮನೆಯನ್ನು ಪಿಲ್ಲರ್ ನಿಂದ ಕಟ್ಟಲು ಸಾಧ್ಯವಿಲ್ಲದಿರುವುದರಿಂದ ಕೆಂಪು ಕಲ್ಲು ಅವಲಂಭಿಸಿದ್ದಾರೆ. ಜಿಲ್ಲಾಡಳಿತದ ನೀತಿಯಿಂದ ಬಡವರಿಗೆ ಮನೆ ಕಟ್ಟುವ ಕನಸು ನುಚ್ಚು ನೂರಾಗಿದೆ. ಮನೆ ಕಟ್ಟುವ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದೇ ನಿರುದ್ಯೋಗಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.

ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಜಿಲ್ಲೆಯಲ್ಲಿ ಕೆಂಪು ಕಲ್ಲಿಗಾಗಿ ಜಿಲ್ಲಾಡಳಿತ ಗುರುತಿಸಿದ 147 ಸ್ಥಳಗಳಲ್ಲಿ ಗುಣಮಟ್ಟದ ಕೆಂಪು ಕಲ್ಲುಗಳು ಲಭ್ಯವಿಲ್ಲದ ಕಾರಣ ಪೂರೈಕೆ ಕಡಿಮೆಯಾಗಿ ಅವಶ್ಯಕತೆ ಜಾಸ್ತಿ ಇದ್ದು ಕೆಂಪು ಕಲ್ಲಿಗೆ ದುಬಾರಿ ದರವನ್ನು ಬಡವರಿಂದ ವಸೂಲಿ ಮಾಡಲು ಜಿಲ್ಲಾಡಳಿತ ಅವಕಾಶ ಮಾಡಿದೆ ಜಿಲ್ಲಾಡಳಿತ ಗುಣಮಟ್ಟದ ಕಲ್ಲು ಸಿಗುವ ಸ್ಥಳದಲ್ಲಿ ಕಾನೂನು ಬದ್ಧ ಪರವಾನಿಗೆ ನೀಡಿ ಕೊರತೆ ನೀಗಿಸಬೇಕು,ರಾಜಧನ ಕೇರಳ ಮಾದರಿಯಂತೆ ಕಡಿಮೆ ಮಾಡಬೇಕು ಈ ಬಗ್ಗೆ ಜಿಲ್ಲಾಧಿಕಾರಿಯವರು ಜಂಟಿ ಸಭೆ ನಡೆಸಿ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿರುವ ಕೆಂಪು ಕಲ್ಲು ಅಥವಾ ಮುರುಕಲ್ಲು ಎಂದು ಕರೆಯಲ್ಪಡುವ ಲ್ಯಾಟರೈಟ್ ಕೋರೆಗಳಿಗೆ ಅಪಾಯವಿಲ್ಲದ ಸ್ಥಳಗಳಲ್ಲಿ ಪರವಾನಿಗೆ ನೀಡಬೇಕು. ಕೇರಳ ಮಾದರಿಯಲ್ಲಿ ರಾಜಧನ ಅಥವಾ ರಾಯಲ್ಟಿ ಪ್ರತಿ ಟನ್ ಗೆ 76 ರೂ. ಮಾತ್ರ ಪಾವತಿಸಲು ಅವಕಾಶ ನೀಡಬೇಕು. ಈಗ ಇರುವ ಬೇರೆ ಬೇರೆ ತೆರಿಗೆಗಳನ್ನು ಕೈ ಬಿಡಬೇಕು. ಆರು ತಿಂಗಳಿಗೊಮ್ಮೆ ಪರವಾನಿಗೆ ನವೀಕರಿಸುವುದನ್ನು ಕೈ ಬಿಟ್ಟು ವರ್ಷಕೊಮ್ಮೆ ನವೀಕರಿಸಲು ಅವಕಾಶ ನೀಡಬೇಕು. ಇದರಿಂದ ಅನಧಿಕೃತ ವ್ಯವಹಾರ ತಡೆಯಲು ಸಾಧ್ಯವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ದೊರಕುವ ಕೋರೆಗಳು ಕಡಿಮೆ ಇರುವುದರಿಂದ ದಕ್ಷಿಣ ಕನ್ನಡ ಕೋರೆಗಳಿಂದ ಬರುವ ಕೆಂಪು ಕಲ್ಲುಗಳಿಗೆ ನಿರ್ಬಂಧ ಹೇರಬಾರದು. ಕೆಂಪು ಕಲ್ಲು ದುಬಾರಿ ದರದಲ್ಲಿ ವಿತರಣೆ ಮಾಡುವವರ ಮೇಲೆ ಕ್ರಮ ಜರುಗಿಸಬೇಕು. ಈ ಹಿಂದಿನ ದರದಲ್ಲಿ ಜನರಿಗೆ ಕಲ್ಲು ಸಿಗುವಂತಾಗಬೇಕು ಎಂದು‌ ಧರಣಿ‌ ನಿರತರು‌ ಆಗ್ರಹಿಸಿದರು‌.

ಧರಣಿಯಲ್ಲಿ ಸಿಐಟಿಯು ಮುಖಂಡರಾದ ಎಚ್ ನರಸಿಂಹ ಚಂದ್ರಶೇಖರ ವಿ,ರಾಮ ಕಾರ್ಕಡ,ಶಶಿಧರ ಗೊಲ್ಲ, ಕವಿರಾಜ್ ಎಸ್ ಕಾಂಚನ್,ಸುಭಾಶ್ಚಂದ್ರ ನಾಯಕ್, ಚಿಕ್ಕ ಮೊಗವೀರ ಗಂಗೊಳ್ಳಿ, ರಾಜೀವ ಪಡುಕೋಣೆ,ಶ್ರೀಧರ ಉಪ್ಪುಂದ, ರಮೇಶ್ ಗುಲ್ವಾಡಿ, ನಾಗರತ್ನ ಪಡುವರಿ, ಜ್ಯೋತಿ,ಶಾಂತಾ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಇದ್ದರು.