ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ ಹಲವು ಮಾರಾಟಗಾರರು ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ಠಿಕಾಣಿ ಹೂಡಿ ಹೂ ಮಾರಾಟ ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಚರಂಡಿಗೆ ಎಸೆದ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ತಂಡವೊಂದು ನಗರದ ಮಾರುಥಿ ವೀಥಿಕಾದಲ್ಲಿ ಕಂಡುಬಂದಿದೆ. ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳಕ್ಕೆ ಧಾವಿಸಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡು ಹೂವು ಮಾರಾಟ ನಿಲ್ಲಿಸಿದರು.
ಮಳೆ ಬಂದ ಕಾರಣ ಹೂವು ವ್ಯಾಪಾರ ಕುಸಿತ ಕಂಡ ಕಾರಣ ಕೆಲವು ವ್ಯಾಪರಿಗಳು ಹೂವುಗಳನ್ನು ಕೊಳಚೆ ಗುಂಡಿಗೆ ಎಸೆದುಹೋಗಿದ್ದರು. ಮತ್ತೊಂದು ವ್ಯಾಪಾರಿ ತಂಡದವರು ಆ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.
ಹೊರ ಜಿಲ್ಲೆಯಿಂದ ಹೂವು ಮಾರಾಟಗಾರರು, ಹಬ್ಬ ಹರಿದಿನಗಳಲ್ಲಿ ಉಡುಪಿಗೆ ಬಂದು ನಗರದೆಲ್ಲೆಡೆ ವ್ಯಾಪಾರ ನಡೆಸುತ್ತಾರೆ. ಉಡುಪಿಯ ಜನತೆ ಹೂವುಗಳನ್ನು ಖರೀದಿಸಿ, ವ್ಯಾಪರಸ್ಥರು ಹಾಗೂ ಹೂವು ಬೆಳೆಗಾರರನ್ನು ಬೆಂಬಲಿಸುತ್ತಿದ್ದಾರೆ. ಆದರೆ ಕೊಳಚೆ ಸ್ಥಳದಲ್ಲಿ ಎಸೆದ ಹೂವುಗಳನ್ನು ಮಾರಾಟ ಮಾಡಿ ಉಡುಪಿಯ ಗ್ರಾಹಕರನ್ನು ವಂಚಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಇಂತಹವರ ಕುಕೃತ್ಯಗಳಿಂದ ಶ್ರದ್ದೆ ಭಕ್ತಿಯಿಂದ ನಡೆಯುವ ಆಚರಣೆಗಳಿಗೆ ಧಕ್ಕೆ ಬರುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.


















