ಉಡುಪಿ:ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ “ಉಡುಪಿ ಶ್ರೀ ಕೃಷ್ಣ ರೈಲ್ವೆ ನಿಲ್ದಾಣ” ಎಂದು ಮರುನಾಮಕರಣ

ಉಡುಪಿ : ಜಿಲ್ಲೆಯ ಪ್ರಮುಖ ರೈಲ್ವೆ ನಿಲ್ದಾಣವಾಗಿರುವ ಇಂದ್ರಾಳಿ ರೈಲ್ವೆ ನಿಲ್ದಾಣ ಇದೀಗ ಹೊಸ ರೂಪದಲ್ಲಿ ಪರಿಚಿತವಾಗಲಿದೆ. ರೈಲ್ವೆ ಇಲಾಖೆ ಅಧಿಕೃತವಾಗಿ ಈ ನಿಲ್ದಾಣವನ್ನು “ಉಡುಪಿ ಶ್ರೀ ಕೃಷ್ಣ” ಎಂದು ಮರುನಾಮಕರಣ ಮಾಡಿದೆ.

ಮಂಗಳೂರಿನಿಂದ ಕಾಸರಗೋಡು, ಗೋವಾ, ಮುಂಬೈ, ಬೆಂಗಳೂರು ಮುಂತಾದ ಕಡೆಗಳಿಗೆ ಸಂಚಾರ ಮಾಡುವ ಅನೇಕ ರೈಲುಗಳು ತಂಗುವ ಈ ನಿಲ್ದಾಣಕ್ಕೆ ಉಡುಪಿ ಶ್ರೀಕೃಷ್ಣನ ಹೆಸರನ್ನು ಇಡುವ ಮೂಲಕ ನಗರದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಗುರುತನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ತಲುಪಿಸಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರು ಹಾಗೂ ಭಕ್ತಾದಿಗಳು ಈ ನಿರ್ಧಾರವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠವು ವಿಶ್ವಪ್ರಸಿದ್ಧ ಯಾತ್ರಾಧಾಮವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಈ ಹೆಸರಿಡುವ ಕ್ರಮವು ಮಹತ್ವ ಪಡೆದಿದೆ. ರೈಲ್ವೆ ಇಲಾಖೆ ಶೀಘ್ರದಲ್ಲೇ ನಿಲ್ದಾಣದ ಫಲಕ, ಟಿಕೆಟ್ ಹಾಗೂ ಇತರ ಅಧಿಕೃತ ದಾಖಲೆಗಳಲ್ಲಿಯೂ ಹೊಸ ಹೆಸರನ್ನು ಅಳವಡಿಸಲು ಕ್ರಮ ಕೈಗೊಳ್ಳಲಿದೆ.