ಉಡುಪಿ:ರೆಡ್‌ಕ್ರಾಸ್ ಸಂಸ್ಥೆಯ ಮಾನವೀಯ ಸೇವೆ ಶ್ಲಾಘನೀಯವಾದುದು : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ರೆಡ್‌ಕ್ರಾಸ್ ಸಂಸ್ಥೆಯು ಮಾನವ ಜೀವನ ಹಾಗೂ ಆರೋಗ್ಯವನ್ನು ರಕ್ಷಿಸಲು ಯಾವುದೇ ಫಲಾಪೇಕ್ಷಿಯಿಲ್ಲದೇ ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರೆಡ್‌ಕ್ರಾಸ್‌ನ ಈ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಅವರು ಸೋಮವಾರ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಇವರ ವತಿಯಿಂದ ಜಿನೇವಾ ಒಪ್ಪಂದ ಐತಿಹಾಸಿಕ ಆಚರಣೆಯ ಸಮಾರೋಪ, ವಿಶ್ವಶಾಂತಿಗಾಗಿ ಮತ್ತು ಮಾದಕ ವ್ಯಸನ ವಿರೋಧಿ ಜಾಥಾ, ಸಾಮಾಜಿಕ ಕಾರ್ಯಗಳಿಗೆ ನಿಧಿ ಸಂಗ್ರಹಣೆ ಹಾಗೂ ನೆರೆ ಸಂತ್ರಸ್ತರು ಮತ್ತು ಅರ್ಹ ಫಲಾನುಭವಿಗಳಿಗೆ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರೆಡ್‌ಕ್ರಾಸ್ ಸಂಸ್ಥೆಯು ಸಮಾಜಕ್ಕೆ ಬಲಿಷ್ಠ ರೀತಿಯಲ್ಲಿ ಸೇವೆ ನೀಡುತ್ತಿದ್ದು, ಪ್ರಾಕೃತಿಕ ವಿಕೋಪ, ಬರ ನಿರ್ವಹಣೆ, ತುರ್ತು ಅಗತ್ಯದ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಲ್ಲಿಸುತ್ತಿರುವ ಸೇವೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ನಿರ್ಗತಿಕರ ಬದುಕಿಗೆ ಆಶಾಕಿರಣವಾಗಿರುವ ಸಂಸ್ಥೆಯು ನಿರಂತರವಾಗಿ ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆ, ತುರ್ತು ನೆರವು, ರಕ್ತದಾನ, ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದರು.

ನಶಾ ಮುಕ್ತ ಭಾರತವನ್ನಾಗಿಸಲು ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮಾದಕ ವಸ್ತುಗಳ ಕಡೆಗೆ ಯುವಜನರು ಆಕರ್ಷಿತರಾಗದೇ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಹೊಂದುವುದರೊಂದಿಗೆ ತಮ್ಮ ನೆರೆಹೊರೆಯವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದ ಅವರು, ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸುವಂತಹ ಸೇವಾ ಮನೋಭಾವನೆಯನ್ನು ವಿದ್ಯಾರ್ಥಿ ಜೀವನದಿಂದಲೇ ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜನಸಾಮಾನ್ಯರ ಹಾಗೂ ಸರಕಾರದ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆಯು ತುರ್ತು ಪರಿಸ್ಥಿತಿಗಳಲ್ಲಿ ಸಹಾಯಹಸ್ತ ನೀಡುವುದರೊಂದಿಗೆ ಸಮಾಜದ ಅತ್ಯಂತ ಶಕ್ತಿಶಾಲಿ ಮತ್ತು ಸೂಕ್ಷ್ಮ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ ಮಾತನಾಡಿ, ಯುವಜನರು ದೇಶದ ಸಂಪತ್ತಾಗಿದ್ದು, ಸಮಾಜಕ್ಕೆ ಸೇವೆ ಸಲ್ಲಿಸುವಂತಹ ಕಾರ್ಯಗಳಲ್ಲಿ ಕೈಜೋಡಿಸಬೇಕು. ಮಾದಕ ವಸ್ತುಗಳ ಸೇವನೆಯು ಜೀವನಶೈಲಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇವುಗಳಿಂದ ಯುವಪೀಳಿಗೆ ದೂರ ಉಳಿಯುವುದರೊಂದಿಗೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಸಾಗಾಟ ಮಾಡುವುತ್ತಿರುವ ಬಗ್ಗೆ ಸುಳಿವು ಇದ್ದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಮಾದಕ ವ್ಯಸನ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಇದೇ ಸಂದರ್ಭದಲ್ಲಿ ಜಿನೇವಾ ಒಪ್ಪಂದ ಐತಿಹಾಸಿಕ ಆಚರಣೆಯ ಸಮಾರೋಪ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು, ಶ್ರವಣ ಸಾಧನ, ಪೊಲೀಸ್ ಇಲಾಖೆಗೆ ರೈನ್ ಕೋಟ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಕಿಟ್, ಹೊಲಿಗೆ ಯಂತ್ರ, ನೆರೆ ಪರಿಹಾರ ಫಲಾನುಭವಿಗಳಿಗೆ ಗೃಹಪಯೋಗಿ ವಸ್ತುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಸದಾನಂದ ಮೂಲ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲಾ ಗವರ್ನರ್ ಪಿಎಮ್‌ಜೆಎಫ್ ಲಯನ್ ಸ್ವಪ್ನಾ ಸುರೇಶ್, ಖಜಾಂಚಿ ರಮಾದೇವಿ, ಆಡಳಿತ ಮಂಡಳಿಯ ಸದಸ್ಯ ಟಿ ಚಂದ್ರಶೇಖರ್, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ರೆಡ್‌ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ರಾಘವೇಂದ್ರ ಪ್ರಭು ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಜಿಲ್ಲಾ ಕ್ರೀಡಾಂಗಣದ ಮುಂಭಾಗದಿಂದ ಶ್ರೀಕೃಷ್ಣ ಮಠದ ರಾಜಾಂಗಣದವರೆಗೆ ನಡೆದ ಮಾದಕ ವ್ಯಸನ ವಿರೋಧಿ ಜಾಥಾಕ್ಕೆ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಸಭಾಪತಿ ಎಸ್ ಜಯಕರ ಶೆಟ್ಟಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು.