Mister India Heritage 2025 ಸ್ಪರ್ಧೆ: ಪ್ರಥಮ ರನ್ನರ್-ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ರಂಜಿತ್ ಗಾಣಿಗ

ಉಡುಪಿ: ಉಡುಪಿ ಜಿಲ್ಲೆಯ ಉಪ್ಪೂರು, ತೆಂಕಬೆಟ್ಟು ಮೂಲದ ರಂಜಿತ್ ಗಾಣಿಗ ಅವರು ಕರ್ನಾಟಕವನ್ನು ಪ್ರತಿನಿಧಿಸಿ Mister India Heritage 2025 ಸ್ಪರ್ಧೆಯಲ್ಲಿ ಪ್ರಥಮ ರನ್ನರ್-ಅಪ್ ಸ್ಥಾನವನ್ನು ಪಡೆದು ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ.

ಗೋವಾದಲ್ಲಿ ಆರು ದಿನಗಳ ಕಾಲ ನಡೆದ ಈ ಪ್ರತಿಷ್ಠಿತ ರಾಷ್ಟ್ರೀಯ ವೇದಿಕೆಯಲ್ಲಿ ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುವುದರ ಜೊತೆಗೆ, Best Physique ಹಾಗೂ Best Personality ಎಂಬ ಎರಡು ವಿಶೇಷ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಈ ಸಾಧನೆಯೊಂದಿಗೆ, ರಂಜಿತ್ ಗಾಣಿಗ ಅವರು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದು, ತಮ್ಮ ಪ್ರತಿಭೆಯ ಜೊತೆಗೆ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ತೋರಿಸಲು ಮುಂದಾಗಿದ್ದಾರೆ.

ತಮ್ಮ ಸಾಧನೆಯ ಕುರಿತು ಅಭಿಪ್ರಾಯ ಹಂಚಿಕೊಂಡ ರಂಜಿತ್ ಗಾಣಿಗ ಹೇಳಿದರು: “ಕರ್ನಾಟಕವನ್ನು ಪ್ರತಿನಿಧಿಸಿ ಇದೀಗ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ನನಗೆ ಹೆಮ್ಮೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞ. ಇದು ಕೇವಲ ಆರಂಭ, ಮುಂದಿನ ದಿನಗಳಲ್ಲಿ ನನ್ನ ದೇಶದ ಹೆಸರನ್ನು ವಿಶ್ವ ವೇದಿಕೆಯಲ್ಲಿ ಹೆಮ್ಮೆಪಡುವಂತೆ ಮಾಡುವ ಜವಾಬ್ದಾರಿಯಿದೆ” ಎಂದು ಹೇಳಿದರು.