ಉಡುಪಿ: 60ನೇ ಸಂಭ್ರಮದಲ್ಲಿರುವ ರಂಗಭೂಮಿ ಉಡುಪಿ ಸಂಸ್ಥೆಯ ಸ್ಥಾಪನೆಗೆ ಮುಖ್ಯ ಕಾರಣಕರ್ತರಾಗಿ, ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ 45 ವರ್ಷಗಳ ಕಾಲ “ರಂಗಭೂಮಿ” ಯನ್ನು ಕಟ್ಟಿ ಬೆಳೆಸಿದ ದಿ. ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣಾರ್ಥವಾಗಿ ‘ರಂಗಭೂಮಿ ಆನಂದೋತ್ಸವ’ ಕಾರ್ಯಕ್ರಮವನ್ನು ಮೇ 4ರಂದು ಸಂಜೆ 5.45ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಮಣಿಪಾಲ ಟಿ. ಅಶೋಕ್ ಪೈ ಅವರು ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ರಂಗಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ “ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುವುದು ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಹೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಭಾಕಾರ್ಯಕ್ರಮದ ನಂತರ ಮಂಗಳೂರಿನ ಹಿರಿಯ ರಂಗ ಸಂಸ್ಥೆಯಾದ ಆಯನ ನಾಟಕ ಮನೆಯ ಕಲಾವಿದರು ” ಅಶ್ವತ್ಥಾಮ ನಾಟ್ ಔಟ್” ಎಂಬ ಕನ್ನಡ ನಾಟಕ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಭಾಸ್ಕರ್ ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಹಾಗೂ ಕೋಶಾಧಿಕಾರಿ ಭೋಜ ಯು. ಉಪಸ್ಥಿತರಿದ್ದರು.












