ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಬಂಟಕಲ್ಲು- ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ, ಮಣಿಪಾಲ ಮತ್ತು ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಪರ್ಕಳ ಇದರ ಸಹಭಾಗಿತ್ವದಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಯಾವುದೇ ಆದಾಯ ವಿಲ್ಲದೆ ಆರ್ಥಿಕ ಸಂಕಟಕ್ಕೀಡಾಗಿರುವ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉಡುಪಿ ಸುತ್ತ ಮುತ್ತಲಿನ ಎಲ್ಲಾ ಗ್ರಾಮಗಳಿಂದ ಮಾಹಿತಿ ಕಲೆ ಹಾಕಿ ಸುಮಾರು 100ಕ್ಕೂ ಅಧಿಕ ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, ಕರ್ಜೆ ಮತ್ತು ಕುಕ್ಕೆಹಳ್ಳಿ ಪರಿಸರದ 19 ಫಲಾನುಭವಿಗಳಿಗೆ ಗುರುವಾರ ದಿನಸಿ ಕಿಟ್ ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ದುರ್ಗಾ ಪರಮೇಶ್ವರಿ ಸೊಸೈಟಿಯ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ, ಆರ್ ಎಸ್ ಬಿ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿದ್ಯಾ ವಿ. ನಾಯಕ್, ಆರ್ ಎಸ್ ಬಿ ಸಂಘ ಮಣಿಪಾಲ ಇದರ ಕಾರ್ಯದರ್ಶಿ ಸುಮಿತ್ರಾ ಎಚ್. ನಾಯಕ್ ದೇವಿನಗರ ಮೊದಲಾದವರು ಉಪಸ್ಥಿತರಿದ್ದರು.
ಆರ್ ಎಸ್ ಬಿ ಸಂಘ ಮಣಿಪಾಲ ಇದರ ಅಧ್ಯಕ್ಷ ಎಂ. ಗೋಕುಲ್ ದಾಸ್ ನಾಯಕ್ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್. ನಾಯಕ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಸಮಾಜ ಸೇವಾ ಕಾರ್ಯಕ್ರಮ ಮೂರ್ನಾಲ್ಕು ದಿನ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.