ಉಡುಪಿ: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟ; ಸುಳ್ಳು ಸುದ್ದಿ ನಂಬಬೇಡಿ – ವಿದ್ಯಾರ್ಥಿಗಳು, ಹೆತ್ತವರಲ್ಲಿ ಶಾಲಾ ಶಿಕ್ಷಣ ಇಲಾಖೆ ಮನವಿ.!

ಉಡುಪಿ: ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಗಳು ಮಾರಾಟ ವಾಗುತ್ತಿದೆ ಎಂಬ ಸುದ್ದಿಯನ್ನು ಕೆಲವು ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಪಡಿಸಲಾಗಿದೆ.

ಈ ಮಾಹಿತಿಯನ್ನು ಪರಿಶೀಲಿಸಲಾಗಿ ಯಾವುದೇ ಪೂರಕ ಪುರಾವೆಗಳು ಇರುವುದಿಲ್ಲ. ಇದು ತಪ್ಪು ಮಾಹಿತಿಯಾಗಿದ್ದು, ವಿದ್ಯಾರ್ಥಿ ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂತಹ ಸುಳ್ಳು ಸುದ್ದಿ ಹರಡುವವರನ್ನು ಗುರುತಿಸಿ ಅಂತಹವರ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಸಾರ್ವಜನಿಕರು, ಪಾಲಕ, ಪೋಷಕರು ಇಂತಹ ವದಂತಿಗಳಿಗೆ ಮಹತ್ವ ನೀಡದೇ ತಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಪರೀಕ್ಷಾ ಸಿದ್ಧತೆಗೆ ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ಮಂಡಳಿಯ ಜಾಲತಾಣದಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಾಗಿರುವ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳ ಅಂಕಣದಲ್ಲಿ ಒದಗಿಸಲಾಗಿದೆ. ಈ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಸುಳ್ಳು ಸುದ್ದಿಗಳ ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೋಸ ಹೋಗಬಾರದೆಂದು ಸಾರ್ವಜನಿಕರನ್ನು ಹಾಗೂ ಪಾಲಕ ಪೋಷಕರನ್ನು ಉಪನಿರ್ದೇಶಕರು ಕೋರಿದ್ದಾರೆ.