ಉಡುಪಿ: ಬ್ರಹ್ಮಾವರದ ಆರೂರು ಗ್ರಾಮದ ವಿದುಷಿ ದೀಕ್ಷಾ ಅವರು 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ಮಾಡಿ ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಆದರೆ, ಅವರು ಒಂಭತ್ತು ದಿನಗಳಲ್ಲಿ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡುವ ಗುರಿ ಹೊಂದಿದ್ದು, ನಾಳೆ ಮಧ್ಯಾಹ್ನ 3.30ಕ್ಕೆ ಸಾಧನೆ ಗುರಿ ತಲುಪಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಶಾಸಕ ರಘುಪತಿ ಭಟ್ ಅವರು, ವಿದುಷಿ ದೀಕ್ಷಾ ಅವರು 216 ಗಂಟೆಗಳ ಗುರಿ ಸಾಧನೆ ಮಾಡುವ ಹಿನ್ನೆಲೆಯಲ್ಲಿ ಆ.30ರ ಸಂಜೆ 5ಗಂಟೆಗೆ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ದೀಕ್ಷಾ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಮುಖ್ಯಸ್ಥ ಮನಿಶ್ ಬಿಶ್ನೋಯ್ ಸೇರಿದಂತೆ ಪ್ರಮುಖ ಗಣ್ಯರು ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸಮಾಜ ಸೇವಕರು, ಕಲಾ ಸಾಧಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಠಾಕೂರ್, ರಾಹುಲ್, ಶ್ರೀಧರ್ ಬನ್ನಂಜೆ ಇದ್ದರು.












