ಪಿಎಸ್ ಐ ಅನಂತಪದ್ಮನಾಭ ಅಮಾನತು ಆದೇಶ ವಾಪಸ್: ಡಿಸಿಐಬಿ ಘಟಕಕ್ಕೆ ವರ್ಗಾವಣೆ

ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ಇತ್ತೀಚೆಗೆ ಅಮಾನತುಗೊಂಡಿದ್ದ ಉಡುಪಿ ನಗರಠಾಣೆಯ ಪಿಎಸ್ ಐ ಅನಂತಪದ್ಮನಾಭ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಉಡುಪಿಯ ಡಿಸಿಐಬಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.
ಅನಂತಪದ್ಮನಾಭ ಅವರು ಅಜ್ಜರಕಾಡಿನ ಪಾರ್ಕ್ ನಲ್ಲಿ ಈಚೆಗೆ ನಡೆದ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪದಡಿ ಎಸ್ಪಿ ನಿಶಾ ಜೇಮ್ಸ್ ಅಮಾನತು ಮಾಡಿದ್ದರು. ಆ ಬಳಿಕ ಅಮಾನತು ಆದೇಶ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೂ ಗ್ರಸವಾಗಿತ್ತು. ಅಮಾನತು ಆದೇಶದ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಈ ಹಿನ್ನೆಲೆಯಲ್ಲಿ ತಮ್ಮ ಆದೇಶದ ತೀವ್ರತೆಯನ್ನು ಅರಿತುಕೊಂಡ ಎಸ್ ಪಿ ಅದನ್ನು ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ ಅವರಿಗೆ ವರ್ಗಾವಣೆ ಮಾಡಿದ್ದರು. ಇದೀಗ ಎಸ್ಪಿ ಅವರು ಪಿಎಸ್ ಐ ಅಮಾನತು ಆದೇಶವನ್ನು ಹಿಂಪಡೆದು, ಡಿಸಿಐಬಿ ಘಟಕಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.