ಉಡುಪಿ:80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದಲ್ಲಿ 6.30 ಎಕರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಮೀನಿನಲ್ಲಿ ಉಡುಪಿ ಕಂಬಳ ಆಯೋಜನೆ ಸಂಬಂಧ ಫೆ.28ರ ಬೆಳಗ್ಗೆ 10 ಗಂಟೆಗೆ ಶಂಕುಸ್ಥಾಪನೆ ಮಾಡಲು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಂದಾಗಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮಾ.4ರಂದು ಶಂಕುಸ್ಥಾಪನೆ ನಡೆಸಲು ತೀರ್ಮಾನಿಸಿದ್ದಾರೆ. ಇದೀಗ ಇಂದು ಕಾರ್ಯಕ್ರಮ ನಡೆಯದಂತೆ ಜಿಲ್ಲಾಡಳಿತ ಆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಅದೇಶ ಹೊರಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರ ನಡುವಿನ ತಿಕ್ಕಾಟ ತಾರಕಕ್ಕೆ ಏರಿದ್ದು, ಕಂಬಳಕ್ಕೆ ಜಮೀನು ಕಾಯ್ದಿರಿಸಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದ್ದು ಅಧಿಕೃತವಾಗಿ ಮಾರ್ಚ್ 4 ರಂದು ಕಾರ್ಯಕ್ರಮ ಆಯೋಜಿಸುವ ಕುರಿತು ಈಗಾಗಲೇ ಜಿಲ್ಲಾಡಳಿತ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅನಧಿಕೃತವಾಗಿ ಕಾರ್ಯಕ್ರಮ ಆಯೋಜಿಸಿರುವುದರಿಂದ ಗಲಾಟೆಯಾಗುವ ಸಂಭವ ಇರುವುದರಿಂದ ಕಾದಿರಿಸಿದ ಜಮೀನು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಯಾವುದೇ ಶಸ್ತ್ರಾಸ್ತ್ರಗಳನ್ನು ಒಯ್ಯುವುದು, ಪಟಾಕಿ ಸಿಡಿಸುವುದು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಚಿತ್ರಗಳನ್ನು ಸಂಕೇತಗಳನ್ನು ಭಿತ್ತಿ ಪತ್ರಗಳನ್ನು ಅಥವಾ ಇತರೆ ಯಾವುದೇ ವಸ್ತು, ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.