ಉಡುಪಿ: ವಾರಾಹಿ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಷಯ ಇಂದು ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರಾಹಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯೆ ಸುಮಿತ್ರಾ ಆರ್. ನಾಯಕ್ ಅವರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೀಪಾವಳಿ ಹಬ್ಬಕ್ಕೆ ನೀರಿಲ್ಲದೆ ಜನರಿಗೆ ತೊಂದರೆ ಅನುಭವಿಸಿದ್ದರು ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ಬಜೆ ಡ್ಯಾಂ ನೀರಿನ ಪೂರೈಕೆಯ ಜವಾಬ್ದಾರಿಯನ್ನು ವಾರಾಹಿ ಯೋಜನೆಯವರಿಗೆ ವಹಿಸಿ ಕೊಟ್ಟಿರುವುದರಿಂದ ತೊಂದರೆ ಆಗುತ್ತಿದೆ. ಇದರಿಂದ ಜನ ನಮ್ಮ ವಿರುದ್ಧ ಪ್ರತಿಭಟಿಸುವ ಸ್ಥಿತಿ ಬಂದಿದೆ. ಆದುದರಿಂದ ನಗರಸಭೆ ಹಿಂದಿನಂತೆ ಬಜೆ ನೀರಿನ ನಿರ್ವಹಣೆಯನ್ನು ಮಾಡಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಬಜೆ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ನಿರಂತರವಾಗಿ ಮಳೆಯು ಸುರಿಯುತ್ತಿದ್ದು, ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿರ್ವಹಣೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ನಗರಸಭೆ ಅಧಿಕಾರಿಗಳು ಹಾಗೂ ವಾರಾಹಿ ಯೋಜನೆಯ ಅಧಿಕಾರಿಗಳಿಗೆ ಸಮನ್ವಯತೆಯ ಕೊರತೆಯಾಗಿದೆ. ಇದರಿಂದ ಜನರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ತುರ್ತಾಗಿ ನಗರಸಭೆ ಮತ್ತು ವಾರಾಹಿ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಪೌರಾಯುಕ್ತ ಮಹಾಂತೇಶ್ ಹಂಗರಗಿ ಮಾತನಾಡಿ, ನಮಗೂ ಸಾಕಷ್ಟು ದೂರುಗಳು ಬರುತ್ತಿವೆ. ಆದುದರಿಂದ ಇದಕ್ಕೆ ಸಂಬಂಧಿಸಿದ ಇಂಜಿನಿಯರ್ ಜೊತೆ ಮಾತನಾಡಿ, ಸಮಸ್ಯೆ ಸರಿಪಡಿಸಲಾಗುವುದು. ಇಲ್ಲದಿದ್ದರೆ ಆ ಬಗ್ಗೆ ಮುಂದಿನ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.


















