ಬಡಜನರು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಅನುಕೂಲ‌

ಉಡುಪಿ: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಬಡಜನರು ಬದುಕು ಕಟ್ಟಿಕೊಳ್ಳಲು ಅನುಕೂಲ‌ ಆಗಿದೆ. ಪಂಚ ಗ್ಯಾರಂಟಿ ಯೋಜನೆಯಿಂದ ಜನರ ಖರೀದಿ ಸಾಮರ್ಥ್ಯ ಕೂಡ ಹೆಚ್ಚಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿಯ‌ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಮಂಡಿಸಿರುವ 4.9 ಲಕ್ಷ ಕೋಟಿ ರೂ. ಬಜೆಟ್ ನಲ್ಲಿ 1 ಲಕ್ಷ ಕೋಟಿ ರೂ. ಗ್ಯಾರಂಟಿ ಯೋಜನೆ ಸಹಿತ ವಿವಿಧ ಯೋಜನೆಗಳ ಮೂಲಕ ಜನರಿಗೆ ವರ್ಗಾವಣೆ ಆಗುತ್ತಿದೆ. ಇದರಿಂದ ಜನರ ಖರೀದಿ‌ ಸಾಮರ್ಥ್ಯ ಹೆಚ್ಚಳವಾಗಿದೆ. ಅಲ್ಲದೆ, ರಾಜ್ಯದ ಜನರ ತಲಾ ಆದಾಯ ಕೂಡ ಹೆಚ್ಚಳವಾಗಿದ್ದು, 2024–25ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ‌ ಆಗುತ್ತದೆ. ಬಿಟ್ಟಿ ಭಾಗ್ಯದಿಂದ ಜನರು‌ ಸೋಮಾರಿ ಆಗುತ್ತಾರೆ ಅಂತಾ ಬಿಜೆಪಿ ಟೀಕೆ ಮಾಡಿತ್ತು. ಆದರೆ ಈಗ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿಯೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಕಾಪು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್ ಉಪಸ್ಥಿತರಿದ್ದರು.