ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಆಳಸಮುದ್ರಕ್ಕೆ ಹೋಗಿದ್ದ ಭಾರಿ ಗಾತ್ರದ ಬೋಟುಗಳು ಸಾಲು ಸಾಲಾಗಿ ವಾಪಸು ಬರುತ್ತಿವೆ.
ಕೆಲವು ಬೋಟುಗಳು ಸಮೀಪದ ಬಂದರುಗಳಲ್ಲೇ ಲಂಗರು ಹಾಕಿವೆ.
ಮೇ ತಿಂಗಳ ಅಂತ್ಯದವರೆಗೂ ಮೀನುಗಾರಿಕೆಗೆ ಅವಕಾಶವಿತ್ತು. ಆದರೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಜೋರಾಗಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಕಡಲು ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಆರ್ಭಟ ಕೂಡ ಜೋರಾಗಿದೆ. ಹೀಗಾಗಿ ಅವಧಿಗೂ ಮುನ್ನ ಮೀನುಗಾರಿಕಾ ಋತು ದುರಂತ ಅಂತ್ಯ ಕಂಡಿದೆ. ಸಂಪೂರ್ಣ ನಷ್ಟದಲ್ಲಿ ಮೀನುಗಾರಿಕಾ ಋತು ಮುಗಿದಿದೆ. ವರ್ಷವಿಡೀ ಮೀನು ದೊರಕದೆ ಕಂಗಲಾಗಿದ್ದ ಮೀನುಗಾರರಿಗೆ ಅವಧಿಗೂ ಮೊದಲು ಬಂದ ಮಳೆ ಮತ್ತಷ್ಟು ಪೆಟ್ಟು ನೀಡಿದೆ.












