ಉಡುಪಿ: ಪೂರ್ಣಿಮಾ ಸುರೇಶ್ ಅವರ “ಮಧ್ಯಮಾವತಿ” ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಅಮೋಘ ಹಿರಿಯಡಕ ಇದರ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಮಂದಿರದಲ್ಲಿ ಭಾನುವಾರ ಪೂರ್ಣಿಮಾ ಸುರೇಶ್ ಅವರ ಮಧ್ಯಮಾವತಿ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಯುವ ಜನತೆ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸಂಸ್ಕೃತಿ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಯುವ ಬರಹಗಾರರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದರು.

ಕವನ ಎಂಬುದು ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು ಶಬ್ದ ರೂಪದಲ್ಲಿ ಪ್ರಕಟ ಮಾಡುವವರಿಗೆ ಮಾತ್ರ ಕಾವ್ಯ ಬರೆಯಲು ಸಾಧ್ಯ ವಾಗುತ್ತದೆ. ಒಳಮನಸ್ಸುಗಳು ಮಾತನಾಡಬೇಕು. ಇಲ್ಲದಿದ್ದರೆ ಆ ವ್ಯಕ್ತಿ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಒಳಮನಸ್ಸಿನಲ್ಲಿ ಪ್ರಕಟಿತಗೊಳ್ಳುವ ವಿಚಾರವೇ ಕಾವ್ಯ, ಸಾಹಿತ್ಯ ಆಗಿರುತ್ತದೆ ಎಂದರು.

ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಪುಸ್ತಕ ಕುರಿತು ಮಾತನಾಡಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ, ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್‌ ಎಸ್‌.ನಾಯ್ಕ್,

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಲೇಖಕಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಹಿರಿಯ ಲೇಖಕಿ ಪಾರ್ವತಿ ಐತಾಳ್ ಅವರನ್ನು ಸನ್ಮಾನಿಸಲಾಯಿತು.

ಅಮೋಘ ಸಂಸ್ಥೆಯ ನಿರ್ದೇಶಕ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೇಘನಾ ಕಾರ್ಯಕ್ರಮ ನಿರೂಪಿಸಿದರು.