ಉಡುಪಿ ನಗರದ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆ(PIM)ಯು ದಿನಾಂಕ 18 ಡಿಸೆಂಬರ್ 2025ರಂದು ತನ್ನ ಆವರಣದಲ್ಲಿ “ಭವಿಷ್ಯದ ಆರ್ಥಿಕತೆಗೆ ನಾವೀನ್ಯತೆಗಳು: ನಿರ್ವಹಣೆ, ವಾಣಿಜ್ಯಶಾಸ್ತ್ರ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿನ ಸಂಯೋಜನೆಗಳು” ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತು.
ಈ ಸಮ್ಮೇಳನವನ್ನು ಡಾ. ಗುರುರಾಜ ಕಿದಿಯೂರು, ಪ್ರಾಧ್ಯಾಪಕರು ಹಾಗೂ ಡೀನ್ (ಅಕಾಡೆಮಿಕ್ಸ್), ಟಿ.ಎ.ಪಿ. ಮ್ಯಾನೇಜ್‌ಮೆಂಟ್ ಸಂಸ್ಥೆ, ಮಣಿಪಾಲ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ವ್ಯಾಪಾರ ಕ್ಷೇತ್ರದ ನೈಜ ಉದಾಹರಣೆಗಳನ್ನು ಉಲ್ಲೇಖಿಸುತ್ತಾ, ನವೀನ್ಯತೆಯ ಮಹತ್ವವನ್ನು ಒತ್ತಿ ಹೇಳಿದರು. ಜೊತೆಗೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆಯ ಅಗತ್ಯತೆಯ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದರು. ಅಮೆರಿಕಾದಂತಹ ಪಾಶ್ಚಾತ್ಯ ರಾಷ್ಟ್ರಗಳು ಬಹಳ ಹಿಂದೆಯೇ ಸಂಶೋಧನಾ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದರಿಂದ ಅನೇಕ ಮಹತ್ವದ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಅವರು ತಿಳಿಸಿದರು.

ಪ್ರಸ್ತುತ ಭಾರತವು ಸಂಶೋಧನಾ ಪ್ರಕಟಣೆಗಳ ಸಂಖ್ಯೆಯಲ್ಲಿ ಅಮೆರಿಕಾ ಮತ್ತು ಚೀನಾದ ನಂತರ ಮೂರನೇ ಸ್ಥಾನದಲ್ಲಿರುವುದು ಸಂತೋಷಕರ ಸಂಗತಿ ಎಂದು ಅವರು ಹೇಳಿದರು. ಸಂಶೋಧನಾ ಸಮ್ಮೇಳನಗಳು ಸಂಶೋಧಕರಿಗೆ ಸಾಧ್ಯ ಸಹಯೋಗಿಗಳನ್ನು ಗುರುತಿಸಲು, ಅಂತರಶಾಖಾ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅತ್ಯಂತ ಉಪಯುಕ್ತ ವೇದಿಕೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ಸಮ್ಮೇಳನ ಪ್ರಕಟಣೆಗಳು ವಿದ್ಯಾರ್ಥಿಗಳ ವೃತ್ತಿಕ್ಷೇತ್ರದಲ್ಲಿ ಪ್ರಗತಿಗೆ ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಪುಜ್ಜ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. ಜಿ. ಎಸ್. ಚಂದ್ರಶೇಖರ್, ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಉಂಟಾಗಿರುವ ಪರಿಧಾನ ಬದಲಾವಣೆಯ ಬಗ್ಗೆ ವಿವರಿಸಿದರು. ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳ ಸಾಧನೆ ಮುಖ್ಯವಾಗಿದ್ದರೆ, ಇಂದಿನ ಶಿಕ್ಷಣ ಕ್ಷೇತ್ರವು ಗುಣಮಟ್ಟದ ಸಂಶೋಧನೆ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗುತ್ತಿದೆ ಎಂದು ಅವರು ಹೇಳಿದರು.
1990ರಲ್ಲಿ, ಸಂಶೋಧನೆಯ ಬಗ್ಗೆ ಹೆಚ್ಚಿನ ಗಮನ ಇರದ ಕಾಲಘಟ್ಟದಲ್ಲೇ ಬೆಂಗಳೂರುದಲ್ಲಿ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ (PPISR)ಯನ್ನು ಸ್ಥಾಪಿಸಿದ ಪರಮಪೂಜ್ಯ ಶ್ರೀ ಶ್ರೀ ವಿಭುದೇಶ ತೀರ್ಥರ ದೂರದೃಷ್ಟಿಯನ್ನು ಅವರು ಸ್ಮರಿಸಿದರು. PPISR ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳನ್ನು ಕೌಶಲ್ಯಪೂರ್ಣ ವೃತ್ತಿಪರರಾಗಿ ರೂಪಿಸುವ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳಿಗೆ ಸ್ಪಂದಿಸುವ ವ್ಯಕ್ತಿತ್ವವನ್ನು ಬೆಳೆಸುವ ಗುಣಮಟ್ಟದ ಶಿಕ್ಷಣವನ್ನು ನೀಡಲು ಪೂರ್ಣಪುಜ್ಞ ಸಂಸ್ಥೆಗಳ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಡಾ. ಪಿ. ಎಸ್. ಐತಾಳ್, ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನ ನಿರ್ದೇಶಕರು, ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕರಾದ ಪ್ರೊ. ವೇಣುಗೋಪಾಲ ರಾವ್ ಎ. ಎಸ್. ಅವರು ಸಮ್ಮೇಳನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನದ ಉದ್ದೇಶ ಮತ್ತು ಆಶಯಗಳನ್ನು ವಿವರಿಸಿದರು. ಡಾ. ಭರತ್ ವಿ.. ಸಮ್ಮೇಳನದ ಸಂಚಾಲಕರು, ಧನ್ಯವಾದ ಭಾಷಣವನ್ನು ಸಲ್ಲಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಈ ರಾಷ್ಟ್ರೀಯ ಸಮ್ಮೇಳನದ ಅಭ್ಯಾಸ ಸಂಕಲನ (Book of Abstracts) ಹಾಗೂ ನವೆಂಬರ್ 2025ರಲ್ಲಿ ನಡೆದ ಭಾರತೀಯ ಜ್ಞಾನ ಪರಂಪರೆಗಳ ಅಂತರರಾಷ್ಟ್ರೀಯ ಸಮ್ಮೇಳನದ ಪ್ರೊಸೀಡಿಂಗ್ಸ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವು ಎಂಸಿಎ ವಿದ್ಯಾರ್ಥಿನಿ ಮಿಸ್ ಭಾಗ್ಯವಿ ಅವರ ನೇತೃತ್ವದ ತಂಡದಿಂದ ನಡೆದ ಭಕ್ತಿಪೂರ್ಣ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾಲೇಜಿನ ಎಂ .ಬಿ.ಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ/ ರಾಮಕೃಷ್ಣ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಸಮ್ಮೇಳನದಲ್ಲಿ ಡಾ. ಗುರುರಾಜ ಕಿದಿಯೂರು, ಡಾ. ಗಣೇಶ್ ಭಟ್, ಸಂಶೋಧನಾ ಪ್ರಾಧ್ಯಾಪಕರು, ಶ್ರೀನಿವಾಸ್ ವಿಶ್ವವಿದ್ಯಾಲಯ, ಮಂಗಳೂರು; ಡಾ. ಮಹೇಶ್ ಕೆ. ಎಂ., ಪ್ರಾಂಶುಪಾಲರು, ಜೈನ್ ಸಂಧ್ಯಾ ಕಾಲೇಜು, ಬೆಂಗಳೂರು: ಡಾ. ನಾರಾಯಣ ಭಟ್, ಸಂಶೋಧನಾ ಪ್ರಾಧ್ಯಾಪಕರು, ಶ್ರೀನಿವಾಸ್ ವಿಶ್ವವಿದ್ಯಾಲಯ, ಮಂಗಳೂರು; ಹಾಗೂ ಡಾ. ಗಣೇಶ್ ಐತಾಳ್, ಮಾಜಿ ಉಪಪ್ರಾಂಶುಪಾಲರು, ಎಸ್‌ಎಂವಿಐಟಿಎಂ, ಬಂಟಕಲ್ ಅವರು ಆಮಂತ್ರಿತ ಉಪನ್ಯಾಸಗಳನ್ನು ನೀಡಿದರು. ನಂತರ, ವಿವಿಧ ವಿಷಯಕ್ಷೇತ್ರಗಳನ್ನು ಪ್ರತಿನಿಧಿಸುವ 35 ಸಂಶೋಧನಾ ಪ್ರಬಂಧಗಳ ಪ್ರಸ್ತುತಿಗಳು ನಡೆಯುವ ಮೂಲಕ ಸಮ್ಮೇಳನವು ಯಶಸ್ವಿಯಾಗಿ ಸಂಪನ್ನವಾಯಿತು.

















